ಕಾರ್ಕಳ, ಸೆ 11 (DaijiworldNews/SM): ಪೆನ್ಸಿಲ್ ಲೆಡ್ನಲ್ಲಿ ಚೈನ್ ಲಿಂಕ್ಗಳನ್ನು ಮಾಡುವ ಮೂಲಕ ಕಾರ್ಕಳದ ಯುವಕ ಸುರೇಂದ್ರ ಆಚಾರ್ಯ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಈದು ಗ್ರಾಮದ ನೂರಾಳ್ಬೆಟ್ಟು ನಿವಾಸಿ ಶ್ಯಾಮರಾಯ ಹಾಗೂ ಲಲಿತಾ ಆಚಾರ್ಯ ದಂಪತಿಗಳ ಪುತ್ರ ಸುರೇಂದ್ರ ಆಚಾರ್ಯ ಗಿನ್ನಿಸ್ ದಾಖಲೆ ಬರೆದ ಯುವ ಕಲಾವಿದ.
ಕಳೆದ ಏಪ್ರಿಲ್ 7ರಂದು ಕಾರ್ಕಳದ ಅನಂತಶಯನದ ರೋಟರಿ ಬಾಲಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಈ ದಾಖಲೆ ನಿರ್ಮಿಸಿದ್ದರು. ಪ್ರಸ್ತುತ ಫಲಿತಾಂಶ ಪ್ರಕಟಗೊಂಡಿದೆ. ಇದೇ ದಾಖಲೆಯು ಈ ಹಿಂದೆ ಪಾಕಿಸ್ತಾನ ತನ್ನದಾಗಿರಿಸಿಕೊಂಡಿತು.
ಪೆನ್ಸಿಲ್ ಲೆಡ್ನಲ್ಲಿ ಚೈನ್ ಲಿಂಕ್...!
ಏಳು ಗಂಟೆಗಳ ಅವಧಿಯಲ್ಲಿ ಪೆನ್ಸಿಲ್ ಲೆಡ್ನಲ್ಲಿ ಚೈನ್ ಲಿಂಕ್ ನ್ನು ರಚಿಸಿರುವ ಗಿನ್ನೆಸ್ ದಾಖಲೆ ಪಾಕಿಸ್ತಾನದ ಹೆಸರಿನಲ್ಲಿತ್ತು. ಇದೇ ಅವಧಿಗೆ ಮುನ್ನ ಈ ದಾಖಲೆ ಮುರಿಯುವ ಪ್ರಯತ್ನದಲ್ಲಿ ಸತತ ಏಳು ಗಂಟೆಗಳ ಕಾಲ ಇವರು ಶ್ರಮಿಸಿದ್ದಾರೆ. ೫೮ ಕೊಂಡಿಗಳನ್ನು ರಚಿಸುವ ಮೂಲಕ ಈ ದಾಖಲೆ ತನ್ನದಾಗಿಸಿಕೊಳ್ಳಲಾಗಿದೆ. ಪೆನ್ಸಿಲ್ನ ಮೊನೆಯಲ್ಲಿ, ಸಾಬೂನಿನಲ್ಲಿ ಹಾಗೂ ಸುಣ್ಣ ಕಡ್ಡಿಯಲ್ಲಿ ವಿವಿಧ ಕಲಾಕೃತಿಗಳನ್ನು ಈ ಯುವಕ ರಚಿಸಿದ್ದಾರೆ. ಇವರ ಕೈಚಳಕ ಅತೀ ಸೂಕ್ಷ್ಮ ಕಲೆಯನ್ನು ಅನಾವರಣಗೊಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅತೀ ಸೂಕ್ಮ ಕಲಾಕೃತಿ
ಗಣಪತಿ, ಶ್ರೀಕೃಷ್ಣ, ವಿಶ್ವಕರ್ಮ,ಸರಸ್ಪತಿ, ಎಡೆ ಎತ್ತಿದ ನಾಗರ, ನಾಟರಾಜ, ವೀಣೆ ಸಹಿತ ಸಂಗೀತಾ ಪರಿಕರಗಳು, ಏಸುಕ್ರಿಸ್ತ, ಮದರ್ತೆರೇಸಾ,ವಿಶ್ವಕಪ್, ಮಹಾವೀರ, ಪಾರ್ಶ್ವನಾಥ, ಬಾಹುಬಲಿ, ಬುದ್ಧ, ಮಾನವ ಆಸ್ಥಿಪಂಜರ, ಬಂದೂಕು, ತ್ರಿವರ್ಣ ಧ್ವಜಸ್ತಂಭ, ಸ್ಟ್ರಿಂಗ್, ಶಂಕರಾಚಾರ್ಯ ಪ್ರತಿಮೆ, ಬಸವಣ್ಣನ ಮೂರ್ತಿ, ನರೇಂದ್ರ ಮೋದಿ,ವಿವಿಧ ಭಾಷಾ ನಟರ ಮೂರ್ತಿ, ಮಗುವನ್ನು ಮುದ್ದಿಸುವ ಹೆತ್ತಮ್ಮ, ಪ್ರೇಮಿಗಳು, ಜಿಂಕೆ,ಕುದುರೆ, ಯೋಗಪಟು, ಕೊರಗಜ್ಜ ಸಹಿತಿ ಇತರ ದೈವಗಳ ಮೂರ್ತಿಗಳನ್ನು ಪೆನ್ಸಿಲ್ ಲೆಡ್ನಲ್ಲಿ ಬರೀಗಣ್ಣಿನಲ್ಲಿ ಕೆತ್ತಿದ್ದಾರೆ.
ಅವುಗಳಲ್ಲಿ ಸಂಗೀತ ಕಲಾ ಪರಿಕರಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಹಸ್ತಾಂತರಿಸಿದ್ದು, ಅವುಗಳನ್ನು ಅಲ್ಲಿನ ಮಂಜುಷಾ ವಸ್ತು ಸಂಗ್ರಹಲಾಯದಲ್ಲಿದೆ.