ನವದೆಹಲಿ ಡಿ 27: ಇಂದು ಲೋಕಸಭೆಯಲ್ಲಿ ಬಹು ನಿರೀಕ್ಷಿತ ತ್ರಿವಳಿ ತಲಾಖ್ ಮಸೂದೆ ಮಂಡನೆಯಾಗಿದ್ದು, ಕೇಂದ್ರ ಸರ್ಕಾರ ಈ ಮಸೂದೆ ಮುಸ್ಲಿಂ ಮಹಿಳೆಯರ ಸಮಾನ ಹಕ್ಕು ಮತ್ತು ನ್ಯಾಯಕ್ಕಾಗಿ ಹೊರತುಪಡಿಸಿದರೆ ಆ ಸಮುದಾಯದ ಪ್ರಾರ್ಥನೆ, ಧರ್ಮಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಸೂದೆ ಮಂಡಿಸಿ ಮಾತನಾಡಿದ ಅವರು ಮುಸ್ಲಿಂ ಮಹಿಳೆಯರ ಸಮಾನತೆಯ ಹಕ್ಕು ಹಾಗೂ ನ್ಯಾಯ ದೊರಕಿಸಲೆಂದು ಈ ಮಸೂದೆ ಮಂಡಿಸಲಾಗಿದೆ ಎಂದರು. ಕಾಯ್ದೆಯಂತೆ ಮುಸ್ಲಿಂ ವ್ಯಕ್ತಿ ತನ್ನ ಪತ್ನಿಗೆ ಮೌಖಿಕವಾಗಿಯಾಗಲೀ, ಅಥವಾ ಬರವಣಿಗೆ ಮೂಲಕವಾಗಲೀ, ಇ-ಮೇಲ್, ಸಾಮಾಜಿಕ ಜಾಲತಾಣ, ಎಸ್ ಎಂಎಸ್, ವಾಟ್ಸಪ್ ನಂತಹ ಯಾವುದೇ ತೆರನಾದ ವಿದ್ಯುನ್ಮಾನ ಮಾಧ್ಯಮಗಳ ಮೂಲಕವಾಗಲಿ ತ್ರಿವಳಿ ತಲಾಖ್ ಘೋಷಣೆ ಮಾಡಿದರೆ ಆತನಿಗೆ ಮೂರು ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸುವ ಅವಕಾಶ ಮಸೂದೆಯಲ್ಲಿದೆ. ಇದರೊಂದಿಗೆ ಜೈಲು ಶಿಕ್ಷೆ ಮಾತ್ರವಲ್ಲದೇ ತ್ರಿವಳಿ ತಲಾಖ್ ನೀಡಿದ ಗಂಡನಿಗೆ ದಂಡ ವಿಧಿಸುವ ಅವಕಾಶ ಕೂಡ ಇದ್ದು, ಸಂಬಂಧ ನ್ಯಾಯಾಧಿಕಾರಿ ದಂಡದ ಪ್ರಮಾಣವನ್ನು ನಿರ್ಧರಿಸಬಹುದು ಎಂದು ತಿಳಿಸಿದೆ . ಇನ್ನು ಇ ಮಸೂದೆಯನ್ನು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ನೇತೃತ್ವದ ಆಂತರಿಕ ಸಚಿವಾಲಯ ಸಿದ್ಧಪಡಿಸಿದೆ.ಇನ್ನು ತ್ರಿವಳಿ ತಲಾಖ್ ಮಸೂದೆಗೆ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್, ಟಿಎಂಸಿ, ಆರ್ ಜೆಡಿ ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ.