ಮಂಗಳೂರು, ಸೆ 11 (Daijiworld News/MSP): ಅಪಹರಣಕ್ಕೊಳಗಾದ ಆಂದ್ರ ಪ್ರದೇಶದ ಏಳು ವರ್ಷದ ಬಾಲಕನನ್ನು ಮಾರಾಟ ಮಾಡಲೆತ್ನಿಸಿದಾಗ ಮಂಗಳೂರು ಚೈಲ್ಡ್ಲೈನ್ ಬಾಲಕನನ್ನು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ.
ಪುತ್ತೂರು ತಾಲೂಕಿನ ಬಲ್ನಾಡು ಬಳಿ ಆಂದ್ರ ಮೂಲದ ಶಿಲ್ಪಾ ಎನ್ನುವ ಮಹಿಳೆಯು ಏಳು ವರ್ಷ ಪ್ರಾಯದ ಅಪ್ರಾಪ್ತ ಬಾಲಕನನ್ನು ಅಕ್ರಮವಾಗಿ ಸಾಕುತ್ತಿರುವ ಬಗ್ಗೆ ಮತ್ತು ಸ್ಥಳೀಯ ನಿವಾಸಿ ಮಂಜುನಾಥ ಎಂಬಾತನಿಗೆ ಮಾರಲು ಯತ್ನಿಸಿರುವ ಕುರಿತು ಸಂಶಯಗೊಂಡ ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಯು, ತಾಯಿಯ ಜೊತೆಗೆ ಬಾಲಕನನ್ನು ಮಂಗಳೂರಿನ ಚೈಲ್ಡ್ಲೈನ್-1098 ರ ಕಚೇರಿಗೆ ಕರೆದುಕೊಂಡು ಬಂದಿದ್ದರು.
ಈ ಸಂದರ್ಭ ಚೈಲ್ಡ್ಲೈನ್ ನಿರ್ದೇಶಕರ ನಿರ್ದೇಶನ ಮೇರೆಗೆ ಆಪ್ತಸಮಾಲೋಚಕರು ಬಾಲಕನಿಗೆ ಆಪ್ತ ಸಮಾಲೋಚನೆಯನ್ನು ನಡೆಸಿದಾಗ ಬಾಲಕನು ತಾನು ಆಂದ್ರಪ್ರದೇಶದ ಓಂಗೋಳ ಹತ್ತಿರದ ಸೀತಾರಾಮ್ ಪುರದ ಬಾಲಕನಾಗಿದ್ದು, ಬೆಂಗಳೂರಿನ ಯಶವಂತ ಪುರದ ರೈಲ್ವೇ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಮಲಗಿರುವಾಗ ಶಿಲ್ಪಾ ಎಂಬಾಕೆಯು ತನ್ನನ್ನು ಕರೆದುಕೊಂಡು ಬಂದಿರುವುದಾಗಿ ಮಾಹಿತಿ ನೀಡಿದ್ದಾನೆ.
ಬಾಲಕ ನೀಡಿರುವ ಮಾಹಿತಿ ಪ್ರಕಾರ ಚೈಲ್ಡ್ಲೈನ್ ತಂಡವು ಪುತ್ತೂರಿನ ಸಂಪ್ಯ ಪೊಲೀಸ್ ಠಾಣೆಯಲ್ಲಿ ಬಾಲಕನ ಅಪಹರಣ ಮಾಡಿದ ಶಿಲ್ಪಾ ವಿರುದ್ದ ದೂರು ನೀಡಿದ್ದಾರೆ. ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಿ ಸೂಕ್ತ ಪುನರ್ವಸತಿಯನ್ನು ಕಲ್ಪಿಸಲಾಗಿದೆ