ಮಂಗಳೂರು ಡಿ 27: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಬಂಟ್ವಾಳ ಕ್ಷೇತ್ರದಲ್ಲಿ ತಾನು 6 ಬಾರಿ ಗೆದ್ದು ಬರುವಲ್ಲಿ ಮುಸ್ಲಿಮರ ಸಮುದಾಯಕ್ಕೆ ಕ್ರೆಡಿಟ್ ನೀಡಿದ್ದಲ್ಲದೇ, ಮುಸ್ಲಿಂ ಸಮುದಾಯದ ಜನರ ಋಣ ಜನ್ಮ ಜನ್ಮಾಂತರಗಳಿಗೂ ತೀರಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಹಿಂದೂ ಸಮುದಾಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಡಿಸೆಂಬರ್ 26ರಂದು ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬ್ಯಾರಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಮಾನಾಥ ರೈ, ಇವತ್ತು ಅಲ್ಲಾಹುವಿನ ಕೃಪೆಯಿಂದ ನನಗೆ ಆರು ಬಾರಿ ಶಾಸಕನಾಗಲು ಅವಕಾಶ ದೊರಕಿದರೆ ಮುಸ್ಲಿಂ ಸಮುದಾಯ ಕಾರಣ.
ಜಾತಿಯಿಂದಲೇ ಒಬ್ಬ ನಿಂತಿದ್ದಾನೆ ಎಂದು ಹೇಳಿ ಅವರಿಗೆ ಮುಸ್ಲಿಮರು ಓಟು ಹಾಕುತ್ತಿದ್ದರೆ ರಮಾನಾಥ ರೈ ಯಾವಾಗಲೋ ಮಾಜಿ ಆಗುತ್ತಿದ್ದ. ಜಾತಿ, ಧರ್ಮದ ಪರಿಧಿಯನ್ನು ಮೀರಿ ರಮಾನಾಥ ರೈ ವಿಧಾನಸಭೆಗೆ ಆಯ್ಕೆ ಮಾಡುವ ಕೆಲಸ ಮಾಡಿದ್ದಾರೆ. ನಿಮ್ಮ ಋಣ ಜನ್ಮಜನ್ಮಾಂತರ ಕಾಲಕ್ಕೆ ನಾನು ಮರೆಯಲು ಸಾಧ್ಯವಿಲ್ಲ. ನನ್ನ ಬಗ್ಗೆ ಬಹಳ ಜನ ಅಪಪ್ರಚಾರ ಮಾಡುತ್ತಿದ್ದರೆ ಆದರೆ, ಆ ಅಪಪ್ರಚಾರದಲ್ಲೂ ನನಗೆ ಸಂತೋಷವಿದೆ. ರಮಾನಾಥ ರೈ ಬಂಟರಿಗೆ ಮಾತ್ರ ಸಹಾಯ ಮಾಡುತ್ತಾರೆ, ಜಾತೀವಾದಿ ಎಂದು ಯಾರೂ ಹೇಳುವುದಿಲ್ಲ. ಮತೀಯವಾದಿ ಎಂದೂ ಹೇಳುವುದಿಲ್ಲ. ಅಲ್ಪಸಂಖ್ಯಾತರನ್ನು ಪ್ರೀತಿ ಮಾಡುತ್ತೇನೆ ಎನ್ನುವ ಆರೋಪವೂ ಇದೆ ಆದರೆ ಅದನ್ನು ನಾನು ಆರೋಪ ಎಂದು ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ . ರೈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಿಂದೂ ಸಮುದಾಯವರೂ ಕೂಡಾ ಹಾಕಿದ ಓಟನ್ನು ಮರೆತು ಕೇವಲ ಮುಸ್ಲಿಂ ಸಮುದಾಯದ ಜನರಿಗೆ ಮಣೆ ಹಾಕುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಸಚಿವ ರಮಾನಾಥ ರೈ ಹೇಳಿಕೆ ಹಿಂದೂ ಸಮುದಾಯದ ಜನರಲ್ಲಿ ಅಸಮಾಧಾನ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.