ಮಂಗಳೂರು, ಸೆ.11(Daijiworld News/SS): 13 ಸಾವಿರ ಅಡಿ ಎತ್ತರದಿಂದ ಜಿಗಿದು ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ವಿಶಿಷ್ಟವಾಗಿ ಸೆಲ್ಯೂಟ್ ಹೊಡೆಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೋಡಪದವು ನಿವಾಸಿಯಾಗಿರಿವ ಸಫ್ವಾನ್ ಶಾ ಸಾಹಸ ಪ್ರದರ್ಶಿಸಿದ್ದಾರೆ.
ಕೈಯ್ಯಲ್ಲಿ ‘ಐ ಲವ್ ಇಂಡಿಯಾ’ ಎಂದು ಬರೆದು, ಎದೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅಳವಡಿಸಿ ಮಂಗಳೂರಿನ ಯುವಕ ಸಫ್ವಾನ್ ಶಾ ದೂರದ ದುಬೈನಲ್ಲಿ ವಿಮಾನದಿಂದಲೇ ಹೊರಕ್ಕೆ ಹಾರಿ ಸಾಹಸ ಪ್ರದರ್ಶಿಸಿದ್ದಾರೆ. ವಿಮಾನದಿಂದ ಹೊರಗೆ 13 ಸಾವಿರ ಅಡಿ ಎತ್ತರದಲ್ಲಿ ಸ್ಕೈ ಡೈವಿಂಗ್ ಮಾಡಿ ಎಲ್ಲರ ಹುಬ್ಬೆರಿಸಿದ್ದಾರೆ.
ಬಹರೈನಲ್ಲಿ ಉದ್ಯೋಗದಲ್ಲಿರುವ ಸಫ್ವಾನ್ ಶಾ ಅವರಿಗೆ ಸಾಹಸ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದು ಹವ್ಯಾಸ. ದುಬೈನ ಖ್ಯಾತ ನಗರಿ ಪಾಮ್ ಜುಮೈರಾದಲ್ಲಿ 13 ಸಾವಿರ ಅಡಿ ಎತ್ತರದಲ್ಲಿ ಇವರು ಸ್ಕೈ ಡೈವಿಂಗ್ ಮಾಡಿದ್ದು, ವಿಮಾನದಿಂದ ಹೊರಗೆ ಹಾರಿದ ಬಳಿಕ ಸುಮಾರು 30 ನಿಮಿಷ ಕಾಲ ಪ್ಯಾರಾಚೂಟ್ ಆಧಾರದಲ್ಲಿ ಆಕಾಶದಲ್ಲಿ ವಿಹರಿಸಿ, ಬಳಿಕ ನಿಧಾನಕ್ಕೆ ನೆಲಕ್ಕೆ ಇಳಿದು ಕೂಡಲೇ ಅಣ್ಣಾಮಲೈಗೆ ಸೆಲ್ಯೂಟ್ ಹೊಡೆದಿದ್ದಾರೆ.
ಇದೀಗ ಸಫ್ವಾನ್ ಶಾ ಅವರ ಈ ಸಾಹಸ ಪ್ರದರ್ಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.