ನವದೆಹಲಿ ಡಿ 28: ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಹೋದ ಜಾಧವ್ ಅವರ ತಾಯಿ ಮತ್ತು ಪತ್ನಿಯನ್ನು ಅವಹೇಳನಕಾರಿಯಾಗಿ ನಡೆಸಿಕೊಂಡ ಪಾಕಿಸ್ಥಾನದ ಕುತಂತ್ರಿ ಬುದ್ದಿಗೆ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ರಾಜ್ಯಸಭೆಯಲ್ಲಿಂದು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಪಾಕ್ ಮೂಲಭೂತ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದಲ್ಲದೆ ಮಿತಿಯಿಲ್ಲದೆ ಅಸಂಬದ್ದವಾಗಿ ನಡೆದುಕೊಂಡಿದೆ ಎಂದು ಖಂಡಿಸಿ ಈ ಮೂಲಕ ಸಂಸತ್ತಿನಲ್ಲಿ ಪಾಕ್ ಗೆ ನಡೆ ವಿರುದ್ದ ತೀವ್ರ ಕಿಡಿಕಾರಿದರು. ಪಾಕ್ ಭೇಟಿಗೆ ಸಂಬಂಧಿಸಿದಂತೆ ಮೊದಲು ಒಂದಿಷ್ಟು ಒಪ್ಪಿಕೊಳ್ಳಲಾಗುವಂತಹ ಷರತ್ತುಗಳನ್ನು ವಿಧಿಸಿತ್ತು. ಆದರೆ ಬಳಿಕ ಭೇಟಿಯ ಸಂದರ್ಭ ಷರತ್ತುಗಳನ್ನು ಗಾಳಿಗೆ ತೂರಿದೆ. ಪಾಕ್ ಭೇಟಿಯ ಅವಕಾಶವನ್ನು ಮಾನವೀಯ ನೆಲೆಯಲ್ಲಿ ನೀಡಿದ್ದೇನೆ ಎಂದು ಕೊಚ್ಚಿಕೊಂಡ ಪಾಕ್, ಭದ್ರತೆಯ ನೆಪ ಹೇಳಿ ಜಾಧವ್ ತಾಯಿ ಮತ್ತು ಪತ್ನಿಯ ಉಡುಪು ತೊಡುಪುಗಳನ್ನು ಬದಲಿಸಿ, ಅವರ ಬಳೆ, ಮಂಗಳ ಸೂತ್ರ ತೆಗೆಯುವಂತೆ ಹೇಳಿ ಮತ್ತು ಕುಂಕುಮ ಅಳಿಸುವಂತೆ ಹೇಳಿ ಹೇಯವಾಗಿ ನಡೆದುಕೊಂಡಿದೆ. ಕೊನೆಗೆ ಕಾಲಿಗೆ ಧರಿಸಿದ್ದ ಶೂಗಳನ್ನು ತೆಗೆಸುವ ಮೂಲಕ ಅಮಾನವೀಯತೆಯನ್ನೇ ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾಧವ್ ಅವರ ಪತ್ನಿ ಧರಿಸಿದ ಶೂ ನಲ್ಲಿ ಇಲೆಕ್ಟ್ರಾನಿಕ್ ಬೇಹು ಉಪಕರಣ ಇತ್ತೆಂದು ಪಾಕಿಸ್ಥಾನ ಹೇಳಿರುವುದು ಕೇವಲ ಸುಳ್ಳಿನ ಮೂಟೆಯಾಗಿದೆ, ಏರ್ ಪೋರ್ಟ್ ನ ಭದ್ರತಾ ಪರೀಕ್ಷೆಯಲ್ಲಿ ಸಿಗದ ವಸ್ತುಗಳ ಬಗ್ಗೆ ಪಾಕ್ ಸುಳ್ಳಿನ ಕಂತೆ ಹೆಣೆದಿದೆ . ಮೊದಲು ಕ್ಯಾಮೆರಾ ಆಮೇಲೆ ಅದೊಂದು ರೆಕಾರ್ಡರ್ ಆಗಿತ್ತು ಎಂದು ಹೇಳಿತು; ಪಾಕ್ ತನ್ನ ಹೇಳಿಕೆಯಲ್ಲೇ ತಟಸ್ಥ ನಿಲುವನ್ನು ಹೊಂದಿಲ್ಲ ಎಂದು ಕಿಡಿಕಾರಿದರು.