ಸುಳ್ಯ, ಸೆ 11 (Daijiworld News/MSP): ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ನಿರಂತರ ಸುರಿಯುತ್ತಿರುವ ಮಳೆ ಪರಿಣಾಮ ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬೆಟ್ಟದ ಕೆಳಭಾಗದ ಜನರನ್ನು ಸ್ಥಳಾಂತರ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ಕೊಡಗು ಜಿಲ್ಲಾಡಳಿತ ಸೂಚನೆ ನೀಡಿದೆ.
ಈಗಾಗಲೇ ಭಾರತೀ ಸರ್ವೆಕ್ಷಣಾ ಇಲಾಖೆ ಬಂದು ಪರಿಶೀಲನೆ ನಡೆಸಿದ್ದು ಗುಡ್ಡದ ಒಳಗಡೆ ನೀರು ಹೋಗದಂತೆ ಅದಕ್ಕೆ ಪ್ಲಾಸ್ಟಿಕ್ ಹಾಕಿ ಮುಚ್ಚಲು ತಿಳಿಸಿದೆ. ಸ್ಥಳೀಯ ಗ್ರಾಮ ಪಂಚಾಯತ್ ಕೆಳಭಾಗದ ಅಂಗಡಿಯವರಿಗೆ ಮನೆಯ ಮಾಲಕರಿಗೆ ಅಂಗಡಿ ಹಾಗೂ ಮನೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಲು ನೋಟಿಸ್ ನೀಡಿದೆ.
ಭೂ ಕುಸಿತ ಮತ್ತು ಭೂಮಿಯಲ್ಲಿನ ಬಿರುಕಿಗೆ ಮಾನವ ಹಸ್ತಕ್ಷೇಪವೇ ಪ್ರಮುಖ ಕಾರಣ ಎಂದು ವರದಿ ಉಲ್ಲೇಖಿಸಿದೆ. ಅದರಲ್ಲೂ ಅರಣ್ಯ ಇಲಾಖೆ ಅವೈಜ್ಞಾನಿಕ ಇಂಗುಗುಂಡಿ ನಿರ್ಮಾಣ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಬಿರುಕಿಗೆ ಕಾರಣ ಎಂದು ಬೊಟ್ಟು ಮಾಡಲಾಗಿದೆ.