ಬಂಟ್ವಾಳ: ಸೆ 10 (DaijiworldNews/SM): ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಗನಗದು ಕಳವುಗೈದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಎಸ್.ವಿ.ಎಸ್. ಶಾಲಾ ಬಳಿ ಮಂಗಳವಾರ ಹಾಡುಹಗಲೇ ನಡೆದಿದೆ.
ಬಂಟ್ವಾಳ ಬಿ.ಕಸ್ಬಾ ಗ್ರಾಮದ ಎಸ್.ವಿ.ಎಸ್. ಶಾಲಾ ರಸ್ತೆಯ ಭದ್ರಕಾಳಿ ಕಟ್ಟೆಯ ಬಳಿಯಿರುವ ಖಾಸಗಿ ಸರ್ವೇಯರ್ ಲೋಹಿತ್ ಎನ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಕೋಣೆಯಲ್ಲಿದ್ದ ಗೊದ್ರೇಜ್ ನ ಬೀಗ ಮುರಿದು ನಗನಗದು ಕಳವು ಮಾಡಿದ್ದಾರೆ. ಲೋಹಿತ್ ಅವರ ಪತ್ನಿ ವೀಣಾ ಮನೆ ಸಾಮಾಗ್ರಿಗಳನ್ನು ಖರೀದಿ ಮಾಡಲು ಬಂಟ್ವಾಳ ಪೇಟೆಗೆ ಸುಮಾರು 12ರ ಸಮಯ ತೆರಳಿದ ವೇಳೆ ಮನೆ ಕಳವು ನಡೆದಿರಬೇಕು ಎಂದು ಶಂಕಿಸಲಾಗಿದೆ.
ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡ ಕಳ್ಳರು ಮನೆಗೆ ತಾಗಿಕೊಂಡಿರುವ ಬಚ್ಚಲು ಕೊಟ್ಟಿಗೆಯ ಸಿಮೆಂಟ್ ಸೀಟ್ ತೆಗೆದು ಮನೆಯೊಳಗೆ ನುಗಿದ್ದ ಕಳ್ಳರು ಕಪಾಟಿನಲ್ಲಿದ್ದ ಸುಮಾರು 7.7500 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವೀಣಾ ಅವರು ಮನೆಯಿಂದ ಹೊರಗೆ ಹೋಗುವಾಗ ಗೊಡ್ರೆಜ್ ಬೀಗ ಹಾಕಿ ಬೀಗದ ಕೀಯನ್ನು ಅಲ್ಲೇ ಇಟ್ಟಿದ್ದರು. ಕಳ್ಳರು ಗೊಡ್ರೆಜ್ ಲ್ಲಿದ್ದ 224 ಗ್ರಾಂ ಚಿನ್ನ, 1150 ಗ್ರಾಂ ಬೆಳ್ಳಿಯ ಅಭರಣ ಹಾಗೂ 7.500 ನಗದನ್ನು ಪಡೆದುಕೊಂಡು ಗೊಡ್ರೆಜ್ ಬೀಗ ಹಾಕಿ ಬೀಗವನ್ನು ಜೊತೆಗೆ ಕದ್ದೊಯ್ದಿದ್ದಾರೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಡಿ.ವೈ.ಎಸ್.ಪಿ.ಹಾಗೂ ಸಿಬ್ಬಂದಿ ಗಳು ಬೇಟಿ ಪರಿಶೀಲನೆ ನಡೆಸಿದ್ದಾರೆ.