ಬಂಟ್ವಾಳ, ಸೆ 10 (Daijiworld News/RD): ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಮಾಜಿ ಅಧ್ಯಕ್ಷ, ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ, ತುಳುಲಿಪಿಯನ್ನು ಶಾಲೆಗಳಲ್ಲಿ ಕಲಿಸುವ ಮೂಲಕ ಜನಪ್ರಿಯರಾಗಿದ್ದ ಬಿ ತಮ್ಮಯ್ಯ ಸೆ.10 ರ ಮಂಗಳವಾರ ಮಧ್ಯಾಹ್ನ 2.30ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
71 ವಯಸ್ಸಿನ ಬಿ.ತಮ್ಮಯ್ಯ ಅವರು ಬಂಟ್ವಾಳ ತಾಲೂಕಿನ ಕೈಕುಂಜೆ ನಿವಾಸಿಯಾಗಿದ್ದು, ಮೃತರು ಪತ್ನಿ ಹಾಗೂ ಮಗನನ್ನು ಅಗಲಿದ್ದಾರೆ. ಇವರು ಹಲವು ವರ್ಷಗಳ ಕಾಲ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.
ತುಳು ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಅಭಿನಯಿಸಿ, ಯಕ್ಷಗಾನದಲ್ಲಿ ವೇಷಧಾರಿಯಾಗಿ ಅಭಿನಯಿಸಿದ್ದರು. ಹಣತೆ ,ಕಾಡಿನ ಹಕ್ಕಿ ಹಾಡಿತು, ಶ್ರೀ ನಾರಾಯಣಗುರು ಭಜನೆ, ತಟಪಟ, ಹನಿಪನಿ, ಹನಿಕವಿತೆ ರಚಿಸಿ ಮೊದಲಾದ 6 ಕವನ ಸಂಕಲನ, ಚಿಂತನ-ಮಂಥನ ಲೇಖನಗಳ ಸಂಗ್ರಹ, ಹಿಂದಿರುಗಿ ನೋಡಿದಾಗ-ಆತ್ಮಕಥೆ, ಕರಿಕೋಟು ಕಥಾ ಸಂಕಲನಗಳನ್ನು ರಚಿಸಿದ್ದರು. 'ತುಳುವೆರೆ ಪರ್ಬ' ತುಳು ಲಿಪಿ ಮತ್ತು ಕನ್ನಡದಲ್ಲಿ ಕವನ ಸಂಕಲನ ಬಿಡುಗಡೆಗೊಳಿಸಿದ್ದರು. ‘‘ತುಳುವೆ’’ ಎಂಬ ತುಳು ಭಾಷಾ ಲಿಪಿಯ ಮೊದಲ ಪತ್ರಿಕೆಯನ್ನು ನಿರಂತರವಾಗಿ ಪ್ರಕಟಿಸಿದ್ದರು.
ತುಳು ಭಾಷಾ ಆಸಕ್ತರಿಗಾಗಿ ತುಳು ಲಿಪಿ ಕಲ್ಪುಲೆ ಎಂಬ ಪುಸ್ತಕವನ್ನು ಹೊರತಂದು ತಾವು ತುಳು ಲಿಪಿ ಶಿಕ್ಷಕನಾಗಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ತುಳು ಲಿಪಿಯನ್ನು ಕಲಿಸಿದ್ದರು. ತಮ್ಮಯರ ಸಾಧನೆಯನ್ನು ಗುರುತಿಸಿ ಯುವವಾಹಿನಿ ಜೀವಮಾನ ಸಾಧಕ ಪುರಸ್ಕೃತ ನೀಡಿ ಗೌರವಿಸಿತ್ತು.