ಕಾಸರಗೋಡು, ಸೆ 10 (Daijiworld News/MSP): ಕೇರಳದ ಓಣಂ ಹಬ್ಬಕ್ಕೆ ಮೆರುಗು ನೀಡುವುದಕ್ಕಾಗಿ ಕರ್ನಾಟಕದ ಹೂಗಳಿಗೆ ಬೇಡಿಕೆ ಬಂದಿದೆ. ಪ್ರತಿ ವರ್ಷ ಕರ್ನಾಟಕದ ಹೂವಿನ ವ್ಯಾಪಾರಿಗಳು ನಾನಾ ವಿಧದ ಹೂಗಳೊಂದಿಗೆ ಕಾಸರಗೋಡು ಜಿಲ್ಲೆಯ ಹಲವೆಡೆ ಸೋಮವಾರದಿಂದ ಮಾರಾಟ ಆರಂಭಿಸಿದ್ದಾರೆ.
ಓಣಂ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಆಗಮಿಸಿದ ಹೂ ಮಾರಾಟಗಾರರು ಕಾಸರಗೋಡು ನಗರದ ಹೊಸ ಬಸ್ ನಿಲ್ದಾಣ ಪರಿಸರ, ಹಳೆ ಬಸ್ ನಿಲ್ದಾಣ ಸಹಿತ ಹಲವೆಡೆ ಹೂ ಮಾರಾಟದಲ್ಲಿ ನಿರತರಾಗಿದ್ದಾರೆ. ಇವರ ಹೂವಿಗೆ ಹೆಚ್ಚಿನ ಬೇಡಿಕೆಯೂ ಇದೆ. ಪ್ರತಿವರ್ಷ ನೂರಕ್ಕೂ ಅಧಿಕ ಮಂದಿ ಕರ್ನಾಟಕದಿಂದ ಕಾಸರಗೋಡಿಗೆ ಹೂಗಳೊಂದಿಗೆ ಬರುತ್ತಾರೆ. ಕರ್ನಾಟಕದ ಮೈಸೂರು, ಹಾಸನ, ಚಿಕ್ಕಮಗಳೂರಿನ ಹೂ ಮಾರಾಟಗಾರರು ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಪ್ರಮುಖ ಪೇಟೆಗಳ ರಸ್ತೆ ಬದಿಗಳಲ್ಲಿಹೂವಿನ ವ್ಯಾಪಾರ ನಡೆಸುತ್ತಾರೆ.
ಹಾಸನ, ಮೈಸೂರು, ಚಿಕ್ಕಮಗಳೂರು ಸಹಿತ ನಾನಾ ಕಡೆಗಳಿಂದ ಪೂಕಳಂ ರಚನೆಗಾಗಿಯೇ ಪ್ರತ್ಯೇಕ ವಾಹನದ ಮೂಲಕ ಜಿಲ್ಲೆಗೆ ಹೂ ತರುತ್ತಾರೆ. ಇದರಲ್ಲಿಮುಖ್ಯವಾಗಿ ನೀಲ, ಹಳದಿ, ಬಿಳಿ ಸೇವಂತಿಗೆ, ಮಲ್ಲಿಗೆ, ಮೇರಿಗೋಲ್ಡ್, ಚೆಂಡುಮಲ್ಲಿಗೆ, ಗುಂಡಿ ಹೂ, ನೀಲಿ ಜೀನಿ ಹೀಗೆ ವಿವಿಧ ಬಗೆಯ ಹೂವುಗಳಿಗೆ ಭಾರೀ ಬೇಡಿಕೆಯಿದೆ.
ಓಣಂ ಹಬ್ಬಕ್ಕೆಂದೇ ಹೂ ಕೃಷಿ ಮಾಡಿಕೊಂಡರೂ ಈ ಬಾರಿ ಕರ್ನಾಟಕ ಸಹಿತ ಕೇರಳದಲ್ಲೂ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹೂ ಇಳುವರಿ ಕಡಿಮೆಯಾಗಿದೆ. ಕರ್ನಾಟಕದಿಂದ ತಂದು ಹೂ ಮಾರಾಟ ಮಾಡುವ ರೀತಿಯಲ್ಲಿತಮಿಳುನಾಡಿನಿಂದಲೂ ಜಿಲ್ಲೆಯಲ್ಲಿಹೂ ಮಾರಾಟ ನಡೆಯುತ್ತದೆ. ಆದರೆ ಈ ಬಾರಿ ತಮಿಳುನಾಡಿನ ಹೂಗಳು ಕಾಸರಗೋಡಿಗೆ ತಲುಪಿಲ್ಲ. ತಮಿಳುನಾಡಿನ ಹೂವುಗಳಿದ್ದರೂ ಕರ್ನಾಟಕದ ಹೂ ಮಾರಾಟಗಾರರು ಭರ್ಜರಿ ವ್ಯಾಪಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಹಾಸನದ ಹೂ ಮಾರಾಟಗಾರರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಷ್ಟು ಬೆಲೆಯಾದರೂ ಕೇರಳೀಯರು ಹೂ ಖರೀದಿಸುವುದರಿಂದ ಇವರ ವ್ಯಾಪಾರಕ್ಕೆ ಯಾವುದೇ ಅಡಚಣೆ ಇಲ್ಲ. ಆದರೆ ಕಳೆದ ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ವ್ಯಾಪಾರ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಮಾರಾಟಗಾರರು ಹೇಳುತ್ತಾರೆ.ಈ ವರ್ಷ ಸೆಪ್ಟೆಂಬರ್ 10 ರಿಂದ ಓಣಂ ಆರಂಭವಾಗಿದ್ದು, 13ರ ವರೆಗೆ ನಡೆಯಲಿದೆ. 11ರಂದು ತಿರು ಓಣಂ. ಕೇರಳ ಹೂವಿನ ಹಬ್ಬ ಓಣಂ ಸಂಭ್ರಮದಲ್ಲಿದೆ.
ಓಣಂ ಗೆ ಪೂಕಳಂ ಪ್ರಮುಖವಾಗಿದ್ದು , ಇಷ್ಟವಾದ ಹೂ ಗಳನ್ನು ಖರೀದಿಸಲು ಮುಂದೆ ಬರುತ್ತಿದ್ದಾರೆ. ಅಂದು ರಂಗುರಂಗಿನ ಪುಷ್ಪಗಳಿಂದ ಹೂವಿನ ಪೂಕಳಂ ಸಿದ್ಧಪಡಿಸುತ್ತಾರೆ. ಹಳದಿ, ಕೇಸರಿ, ಕ್ರೀಂ ಬಣ್ಣದ ಚೆಂಡು ಹೂವು, ಸೇವಂತಿಗೆ ಹೀಗೆ ನಾನಾ ಬಣ್ಣ ಬಣ್ಣಗಳ ಹೂವುಗಳನ್ನು ಹಾಕಲಾಗುತ್ತದೆ. ಅಂದು ರಂಗೋಲಿ ಮಧ್ಯದಲ್ಲಿಐಶ್ವರ್ಯದ ಸಂಕೇತವಾಗಿ ದೀಪವನ್ನು ಇಡಲಾಗುತ್ತದೆ. ಉತ್ರಾಡಂ ದಿನವಾದ ಮಂಗಳವಾರವೂ ಹಸಿರು ಎಲೆ, ಸೇವಂತಿಗೆ, ಹಳದಿ, ಕೇಸರಿ, ಕ್ರೀಂ ಬಣ್ಣದ ಚೆಂಡು ಹೂವು, ಮಲ್ಲಿಗೆ ಹೂವು ಉಪಯೋಗಿಸಿ ಉತ್ರಾಡ ದಿನದ ಪೂಕಳಂ ರಚಿಸಲಾಗುತ್ತದೆ.
ಪ್ರೀತಿಯ ರಾಜ ಪ್ರಜೆಗಳನ್ನು ಕಾಣಲು ಬರುತ್ತಾನೆ ಎಂಬ ನಂಬಿಕೆಯಿರಿಸಿ ಇಡೀ ನಾಡನ್ನು ಪೂಕಳಂನಿಂದ ಸಿಂಗರಿಸಿ ಆತನನ್ನು ಸಂಭ್ರಮದಿಂದ ಬರಮಾಡಿಕೊಳ್ಳುವುದು ಎಂಬ ನಂಬಿಕೆ ಇದ್ದು, ಅದಕ್ಕಾಗಿ ಹೂವುಗಳಿಗೆ ಭಾರೀ ಬೇಡಿಕೆ ಇದೆ. ಪೂಕಳಂಗೆ ಬಿಳಿ ಬಣ್ಣದ ತುಂಬೆ ಹೂವಿಗೆ ಪ್ರಾಧಾನ್ಯತೆ ಹೆಚ್ಚು. ಇದೀಗ ಪೇಟೆಯಲ್ಲಿಸುಲಭವಾಗಿ ಗುಲಾಬಿ, ಸೇವಂತಿಗೆ, ಬಿಳಿ ಸೇವಂತಿಗೆ, ಜೀನಿಯಾ, ಚೆಂಡು ಮಲ್ಲಿಗೆ, ಗೊಂಡೆ ಹೂ (ಗುಂಡಿ ಹೂ), ಚಿಂತಾಮಣಿ ಹೂಗಳನ್ನು ಬಳಸಿಕೊಂಡು ಪೂಕಳಂ ರಚಿಸುತ್ತಾರೆ.