ಪುತ್ತೂರು, ಸೆ 09 (DaijiworldNews/SM): ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹ ಹಾಗೂ ಬರ ಸಂತ್ರಸ್ತರ ನೆರವಿಗೆ ರಾಜ್ಯ ಹಾಗೂ ಕೆಂದ್ರ ಸರಕಾರ ಸರಿಯಾದ ಸ್ಪಂದನೆ ನೀಡಲಿಲ್ಲ, ಜನತೆಗೆ ಭಿಕ್ಷೆ ಬೇಕಾಗಿಲ್ಲ. ರಾಜ್ಯದ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ಸರ್ಕಾರಗಳಿಂದ ಸಮರ್ಪಕವಾದ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆ ಒತ್ತಾಯಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿ ಜನತೆ ಬೀದಿಗೆ ಬಿದ್ದಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ. ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಾಕೃತಿಕ ವಿಕೋಪ ನಿಯಮ ಅವಾಸ್ತವಿಕ ನಿಲುವು ಹೊಂದಿದೆ. ಇದರಿಂದ ಸಂತ್ರಸ್ತ ಜನತೆಗೆ ನ್ಯಾಯ ನೀಡಲಾಗುತ್ತಿಲ್ಲ ಎಂದವರು ಹೇಳಿದರು.
ಚುನಾವಣೆಗೆ ಪೂರ್ವ ಭರಪೂರ ಆಶ್ವಾಸನೆಗಳನ್ನು ನೀಡಿದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದರೂ ಇಲ್ಲಿನ ಜನತೆಯ ಸಮಸ್ಯೆಗಳ ಬಗ್ಗೆ ಕನಿಷ್ಠ ಅರ್ಧದಿನ ವೈಮಾನಿಕ ಸಮೀಕ್ಷೆ ನಡೆಸಲೂ ಮುಂದಾಗಿಲ್ಲ. ಇದರಿಂದಾಗಿ ಮೋದಿ ಅವರ ಹೃದಯ ಮಿಡಿತ-ಅಂತರಂಗದ ಬಗ್ಗೆ ಅನುಮಾನ ಪಡುವಂತಾಗಿದೆ. ಅವರ ವರ್ತನೆ ನಾಗರಿಕವಾದ ಲಕ್ಷಣವಲ್ಲ ಎಂದು ಅವರು ದೂರಿದರು.
ರೈತರ ಹಾಗೂ ಜನಸಾಮಾನ್ಯ ಪರವಾಗಿ ಕೆಲಸ ಮಾಡುತ್ತಿರುವ ಎಲ್ಲಾ ಸಂಘಟನೆಗಳ ಒಗ್ಗೂಡುವಿಕೆಯಿಂದ ರಾಜ್ಯದ ನೆರೆ ಮತ್ತು ಬರ ಸಂತ್ರಸ್ಥರ ಬಗೆಗಿನ ಜನತೆಯ ಸಮಸ್ಯೆಗಳನ್ನು ಸಮಗ್ರವಾಗಿ ವರದಿ ತಯಾರಿಸಿ ರಾಜ್ಯದ ಮುಖ್ಯಮಂತ್ರಿ ಅವರಿಗೆ ಸಮರ್ಪಿಸಲಾಗುವುದು. ಅದಕ್ಕೂ ಮೊದಲು ರಾಜ್ಯ ರೈತಸಂಘ ಹಸಿರುಸೇನೆ ವತಿಯಿಂದ ಈಗಾಗಲೇ ರಾಜ್ಯ ಎಲ್ಲಾ ಕಡೆಗಳಿಗೆ ತಂಡಗಳನ್ನು ಕಳುಹಿಸಲಾಗಿದೆ. ಸೆ.೧೦ರಂದು ಮೈಸೂರಿನಲ್ಲಿ ದಕ್ಷಿಣ ಕರ್ನಾಟಕದ ೯ ಜಿಲ್ಲೆಗಳ ವರದಿ ಬಗ್ಗೆ ಚರ್ಚೆ ನಡೆಸಲಾಗುವುದು. ಸೆಪ್ಟೆಂಬರ್ ೧೫ರಂದು ಉತ್ತರಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ನೆರೆ ಸಂತ್ರಸ್ಥ ರೈತರ ಸಮಾವೇಶ ಬಾಗಲಕೋಟೆಯಲ್ಲಿ ನಡೆಯಲಿದ್ದು, ಅದರಲ್ಲಿ ಕೇಂದ್ರ ಸರ್ಕಾರ ನೀತಿಯನ್ನು ಖಂಡಿಸಲಾಗುವುದು. ರೈತರ ಹಕ್ಕೊತ್ತಾಯ ಮಂಡಿಸಲಾಗುವುದು ಎಂದವರು ತಿಳಿಸಿದರು.