ಮಂಗಳೂರು,ಸೆ 09 (Daijiworld News/RD): ನಗರದ ಪಡೀಲ್ ಕೊಡೆಕಲ್ ಸಮೀಪದ ಶಿವನಗರ ಎಂಬಲ್ಲಿ ಮನೆಯ ಆವರಣ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದ ಘಟನೆ ಭಾನುವಾರ ನಡೆದಿದ್ದು, ಮೃತ ಮಕ್ಕಳ ಕುಟುಂಬಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಇಂದು 11 ಲಕ್ಷ ರೂಪಾಯಿಗಳ ಚೆಕ್ ಅನ್ನು ವಿತರಣೆ ಮಾಡಿದರು.
ರಾಜ್ಯ ಸರ್ಕಾರದಿಂದ ನೀಡುವ 10 ಲಕ್ಷ ರೂ. ಮತ್ತು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಇದರಿಂದ ನೀಡಲಾಗುವ 1 ಲಕ್ಷ ರೂ ಹೀಗೆ ಒಟ್ಟು 11 ಲಕ್ಷ ರೂ. ಚೆಕ್ ಅನ್ನ ಮಕ್ಕಳ ಕುಟುಂಬಕ್ಕೆ ನೀಡಿ ಸಾಂತ್ವನ ನೀಡಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು.
ಭಾನುವಾರ ರಾತ್ರಿ ಈ ಇಬ್ಬರು ಮಕ್ಕಳು ಮನೆಯ ಆವರಣ ಗೋಡೆಯ ಸಮೀಪ ಕುಳಿತು ಓದುತ್ತಿದ್ದ ವೇಳೆ ಗೋಡೆ ಕುಸಿದು ಈ ಅವಘಡ ಸಂಭವಿಸಿದ್ದು, ಗೋಡೆಯ ಅವಶೇಷಗಳಡಿ ಸಿಲುಕಿದ್ದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದಾರೆ.