ಮಂಗಳೂರು, ಸೆ.07(Daijiworld News/SS): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಕ್ಕ ಬಳಿ ಸ್ಕಾರ್ಪಿಯೋ ಕಾರೊಂದು ರಸ್ತೆ ವಿಭಜಕವನ್ನು ದಾಟಿಕೊಂಡು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರನ್ನು ಮಣಿಪಾಲ ಎಜುಕೇಷನ್ ಅಕಾಡೆಮಿಯ ಇಂಟೀರಿಯರ್ ಡಿಸೈನಿಂಗ್ ವಿಭಾಗದ ವಿದ್ಯಾರ್ಥಿನಿ ಗ್ಲೋರಿಯಾ (24) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚಾಲಕ ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ. ಸ್ಕಾರ್ಪಿಯೋ ಚಾಲಕ ಅವನತ್ ಮತ್ತು ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಅಪರ್ಣಾ, ಅಂಕಿತಾ, ಗಾಯತ್ರಿ, ಸುಚಲಿತಾ, ರೇಖಾ, ಅನಿತಾ, ಮೇರಿಟಾ ಗಾಯಗೊಂಡವರು.
ಎಂಟು ವಿದ್ಯಾರ್ಥಿಗಳು ಕಾರಿನಲ್ಲಿ ಮಣಿಪಾಲದತ್ತ ಹೋಗುತ್ತಿದ್ದರು. ಈ ಸಂದರ್ಭ ಮುಕ್ಕ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ, ಮಂಗಳೂರಿನತ್ತ ಬರುತ್ತಿದ್ದ ಲಾರಿಗೆ ಗುದ್ದಿದೆ. ಅಪಘಾತದಲ್ಲಿ ಸ್ಕಾರ್ಪಿಯೋ ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಸೇರಿದಂತೆ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.