ಮಂಗಳೂರು, ಸೆ 07 (Daijiworld News/MSP): ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಐಎಎಸ್ ಹುದ್ದೆಗೆ ಶುಕ್ರವಾರ ದಿಢೀರ್ ರಾಜೀನಾಮೆ ಸಲ್ಲಿಸಿದ ವಿಚಾರವಾಗಿ ಮಾಜಿ ಸಚಿವ ಯುಟಿ ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸೆ.07ರ ಶನಿವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, 'ಎರಡು ದಿನದ ಹಿಂದೆ ತಾನೆ ಡಿಸಿ ಜೊತೆಗೆ ಅಭಿವೃದ್ಧಿ ಯೋಜನೆ ಕುರಿತು ನಾನು ಮಾತನಾಡಿದ್ದೆ. ಅವರ ರಾಜೀನಾಮೆ ವಿಚಾರದಲ್ಲಿ ರಾಜಕೀಯ ಷಡ್ಯಂತ್ರ ಇರುವುದನ್ನು ತಳ್ಳಿಹಾಕುವಂತಿಲ್ಲ. ವರ್ಗಾವಣೆ ವಿಚಾರವಾಗಿ ಸಸಿಕಾಂತ್ ಸೆಂಥಿಲ್ ಅಸಮಾಧಾನಗೊಂಡಿದ್ದರು" ಎಂಬ ವಿಚಾರ ಬಹಿರಂಗಪಡಿಸಿದ್ದಾರೆ.
"ಇಂತಹ ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಒತ್ತಡ, ಬೆದರಿಕೆ ಹಾಕಬಾರದು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಬಹಳಷ್ಟು ಅಧಿಕಾರಿಗಳು ಹುದ್ದೆ ತ್ಯಜಿಸಿದ್ದಾರೆ. ನಾನು ರಾಜ್ಯದ ಮುಖ್ಯ ಕಾರ್ಯದರ್ಶಿ ಜೊತೆಗೆ ಮಾತನಾಡಿದ್ದೇನೆ. ಸಸಿಕಾಂತ್ ಸೆಂಥಿಲ್ ಅವರ ರಾಜೀನಾಮೆ ಹಿಂಪಡೆಯಲು ಮನವೊಲಿಕೆ ಮಾಡಲು ಹೇಳಿದ್ದೇನೆ. ಒತ್ತಡಗಳಿದ್ದರೆ ಸಸಿಕಾಂತ್ ಅವರು ರಾಜೀನಾಮೆ ನೀಡುವ ಬದಲು ಐದು ವರ್ಷಗಳವರೆಗೆ ರಜೆ ಮೇಲೆ ಕೂಡಾ ಹೋಗಬಹುದಾಗಿತ್ತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ
ಇದೇ ಸಂದರ್ಭ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ ಅವರು, ಬಿಜೆಪಿ ಸರ್ಕಾರ ಕರುಣೆ ಇಲ್ಲದ ಸರ್ಕಾರ, ಜನವಿರೋಧಿ ಸರ್ಕಾರ ಹೀಗಾಗಿಯೇ ಇಂದಿರಾ ಕ್ಯಾಂಟೀನ್ ಮುಚ್ಚುವ ಬಗ್ಗೆ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ ಸರ್ಕಾರ ಜನವಿರೋಧಿಯಾಗಿದ್ದು, ಈಗಾಗಲೇ ತೊಗರಿಬೇಳೆ ವಿತರಣೆಯನ್ನು ಕೂಡಾ ಸ್ಥಗಿತಗೊಳಿಸಲಾಗಿದೆ. ಮಾತ್ರವಲ್ಲ್ದೆ ಕೇಂದ್ರ ಸರ್ಕಾರ ಸಕ್ಕರೆ ಸಬ್ಸಿಡಿ ರದ್ದು ಮಾಡಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಸಬ್ಸಿಡಿ ದರದಲ್ಲಿ ವಿಟಮಿನ್ಯುಕ್ತ ಆಹಾರ ಕೊಡುತ್ತಿತ್ತು, ಅದರೆ ಬಿಜೆಪಿಗೆ ಈ ಬಗ್ಗೆ ಆಸಕ್ತಿ ಇದ್ದಂತಿಲ್ಲ. ಯಾಕೆ ಬಡವರ ಮಕ್ಕಳು ಪ್ರೊಟೀನ್ ತಿನ್ನಬಾರದೇ..?ಎಂದು ಪ್ರಶ್ನಿಸಿದರು.ಕೋಟಿ ಕೋಟಿ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ಕೊಡೋ ಬದಲು ಆ ಅನುದಾನವನ್ನು ಆಹಾರಕ್ಕೆ ಯಾಕೆ ಕೊಡಲ್ಲ.? ಬಿಜೆಪಿ ಸರ್ಕಾರ ಇನ್ನೂ ಜನರಿಗಾಗಿ ಕೆಲಸ ಮಾಡಲು ರೆಡಿಯಾಗಿಲ್ಲ, ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಯಾರು..? ಇದೊಂದು 50% ರಾಜ್ಯ ಸರ್ಕಾರವಾಗಿದ್ದು ನಿಮ್ಮ ರಾಜಕೀಯಕ್ಕೋಸ್ಕರ ಯಾಕೆ ಜನರಿಗೆ ಕಷ್ಟ ಕೊಡಬೇಕು..?ಎಂದು ಪ್ರಶ್ನಿಸಿದರು