ಪುತ್ತೂರು, ಸೆ 07 (Daijiworld News/MSP): ಸಂಪ್ಯ ಪೊಲೀಸ್ ಠಾಣೆಯ ಎದುರು ಮಂಗಳವಾರ ರಾತ್ರಿ ನಡೆದಿದ್ದ ಹಿಂದೂ ಜಾಗರಣಾ ವೇದಿಕೆಯ ತಾಲ್ಲೂಕು ಸಮಿತಿ ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲ ಅವರ ಹತ್ಯೆ ಪ್ರಕರಣದ 4 ಮಂದಿ ಆರೋಪಿಗಳಿಗೆ ಪುತ್ತೂರು ಪ್ರಥಮ ದರ್ಜೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಆರ್ಯಾಪು ಗ್ರಾಮದ ಸಂಪ್ಯದ ನಿವಾಸಿ ದಿವಂಗತ ಬಾಲಕೃಷ್ಣ ರೈ ಎಂಬುವರ ಪುತ್ರ ಚರಣರಾಜ್ ರೈ (26), ಅವರ ಸಹೋದರ ಕಿರಣ್ ರೈ (36), ಅವರ ವಾಹನ ಚಾಲಕ ಮಂಗಳೂರಿನ ಉಳ್ಳಾಲಬೈಲು ನಿವಾಸಿ ಪ್ರೀತೇಶ್ ಶೆಟ್ಟಿ (28) ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ್ದ ಮಂಗಳೂರು ಅತ್ತಾವರದ ಸಂತೋಷ್ ಯಾನೆ ಸ್ಟೀವನ್ ಮೊಂತೆರೊ ಅವರನ್ನು ಸಂಪ್ಯ ಠಾಣೆಯ ಎಸ್ಐ ಸಕ್ತಿವೇಲು ನೇತೃತ್ವದ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಧೀಶರಾದ ಲತಾದೇವಿ ಅವರು ಆರೋಪಿಗಳಿಗೆ ಸೆಪ್ಟೆಂಬರ್ 20ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಆರೋಪಿಗಳನ್ನು ಬಿಗು ಬಂದೋಬಸ್ತಿನಲ್ಲಿ ಖಾಸಗಿ ಕಾರಿನಲ್ಲಿ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.