Karavali
ಮಂಗಳೂರು: ದಕ್ಷ ಅಧಿಕಾರಿಗಳ ರಾಜೀನಾಮೆ- ದೇಶದಲ್ಲಿ ಪ್ರಾಮಾಣಿಕರಿಗೆ ಉಳಿಗಾಲವಿಲ್ಲ!
- Sat, Sep 07 2019 10:37:27 AM
-
ಮಂಗಳೂರು, ಸೆ 07(DaijiworldNews/SM): ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳು ದೇಶದಲ್ಲಿರುವ ಪ್ರತಿಷ್ಠಿತವಾದ ಪರೀಕ್ಷೆಗಳಾಗಿವೆ. ಜೀವನದ ನೈಜ ಪರೀಕ್ಷೆಯೊಂದಿಗೆ ಭವಿಷ್ಯ ರೂಪಿಸುವ ಕಾರ್ಯ ಇಲ್ಲಿಂದಲೇ ಶುರುವಾಗುತ್ತದೆ. ಇಲ್ಲಿ ತರಬೇತಿ ಪಡೆದು ಉತ್ತೀರ್ಣನಾಗಿ ದೇಶ ಸೇವೆಗೆ ಸಿದ್ದನಾಗುವವನು ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವುದು, ಯಾವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆನ್ನುವ ಜ್ಞಾನ ಹೊಂದಿರುತ್ತಾನೆ. ಯಾವುದೇ ಕ್ಷೇತ್ರಕ್ಕೆ ವ್ಯಯಿಸದ ಶ್ರಮ ಈ ಪರೀಕ್ಷೆಗಳನ್ನು ತೇರ್ಗಡೆಗೊಳಿಸಲು ಬಳಸಲಾಗುತ್ತದೆ. ಇಲ್ಲಿ ತೇರ್ಗಡೆ ಹೊಂದುವುದು ಜೀವನದ ಒಂದು ಘಟ್ಟವನ್ನೇ ಪೂರೈಸಿದಂತೆ. ಇಷ್ಟೆಲ್ಲ ಕಷ್ಟಪಟ್ಟು ಉದ್ಯೋಗ ಗಳಿಸಿದ ಬಳಿಕ ಉತ್ತಮ ಗೌರವದ ಜತೆಗೆ ಸಂಪಾದನೆಯೂ ಇದ್ದೇ ಇದೆ. ಆದರೆ, ಹದಗೆಟ್ಟ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಐಎಎಸ್ ತೇರ್ಗಡೆಗೊಂಡು ಸೇವೆಯಲ್ಲಿರುವವರು ಇವುಗಳನ್ನು ತೊರೆದು ಮನೆಗೆ ತೆರಳುತ್ತಾರೆ ಎಂದಾದರೆ, ಪರಿಸ್ಥಿತಿ ಊಹಿಸಲು ಅಸಾಧ್ಯವಾಗಿದೆ.
ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಉತ್ತಮ ಉದ್ಯೋಗದ ಆಸೆಯಲ್ಲಿ ಅದೆಷ್ಟೋ ಯುವಕರು ಹತಾಶರಾಗಿ ಕಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದಕ್ಷ ಅಧಿಕಾರಿಗಳ ರಾಜೀನಾಮೆ ಪ್ರಶ್ನಾರ್ಥಕವಾಗಿಯೇ ಉಳಿದುಬಿಟ್ಟಿದೆ. ತಾವು ಪಟ್ಟಿರುವಂತಹ ಕಷ್ಟಕ್ಕೆ ಬೆಲೆಯೇ ಇಲ್ಲ ಎಂಬಂತಾಗಿದೆ. ವಾಮ ಮಾರ್ಗದ ಮೂಲಕ ಮೇಲೆ ಬಂದವರು ಶ್ರಮ ಜೀವಿಗಳನ್ನು ಗುಲಾಮರನ್ನಾಗಿಸಿದ್ದು, ಈ ಅನಿಷ್ಟ ಪದ್ಧತಿ ದೇಶದಲ್ಲಿ ಇನ್ನೂ ಕೂಡ ಉಳಿದಿದೆ ಎನ್ನುವುದು ವಿಷಾಧನೀಯ.
ಹಿಂದೆ ದೇಶದ ಜನತೆ ಎದುರಿಸಿದ್ದಂತಹ ಹೀನ ಪರಿಸ್ಥಿತಿಯನ್ನು ಮತ್ತೆ ಎದುರಿಸಬೇಕಾಗಬಹುದು ಎಂಬ ಆತಂಕ ಇದೀಗ ಕಾಡಲಾರಂಭಿಸಿದೆ. ಜನಸೇವೆಯೇ ಜನಾರ್ದನ ಸೇವೆ ಎಂಬ ಘೋಷಣೆಯನ್ನು ಹೊಂದಿರುವ ಸ್ವತಂತ್ರ ಭಾರತದಲ್ಲಿ ಸ್ವತಂತ್ರವಾಗಿ ತಮಗಿರುವ ಅಧಿಕಾರವನ್ನು ಚಲಾಯಿಸುವ ಹಕ್ಕು ಇಲ್ಲದಂತಹ ಪರಿಸ್ಥಿತಿಯಲ್ಲಿ ಇಂದು ನಾವು ನೀವೆಲ್ಲರು ಇದ್ದೇವೆ. ಇದಕ್ಕೆ ದೇಶದೆಲ್ಲೆಡೆ ಅನೇಕ ಉದಾಹರಣೆಗಳು ಸಿಗುತ್ತದೆ. ತಾಜಾ ನಿದರ್ಶನವೆಂಬಂತೆ ಕಣ್ಣೆದುರು ಬರುವುದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್.
ಕಳೆದ ಸರಿಸುಮಾರು ಎರಡು ವರ್ಷಗಳಿಂದ ದ.ಕ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದರು. ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಸದಾ ಜನರೊಡನೆ ಒಡನಾಟ ಹೊಂದಿದ್ದವರು. ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಇತರರಿಗೂ ಅದನ್ನು ಅನುಸರಿಸುವಂತೆ ಮಾರ್ಗದರ್ಶನವನ್ನು ನೀಡುತ್ತಿದ್ದರು. ಜಿಲ್ಲೆಯಲ್ಲಿನ ಹಲವು ಪರಿಸ್ಥಿತಿಗಳನ್ನು ದಿಟ್ಟವಾಗಿ ಎದುರಿಸಿದ್ದರು. ಕಳೆದ ಒಂದು ತಿಂಗಳನಿಂದ ಜಿಲ್ಲೆಗೆ ಶಾಪವೆಂಬಂತೆ ಅಂಟಿಕೊಂಡಿರುವ ಡೆಂಗ್ಯೂ ಮಹಾಮಾರಿಯ ಕುರಿತಾಗಿ ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮಗಳು ಅಷ್ಟಿಷ್ಟಲ್ಲ.
ಸ್ವತಃ ತಾವೇ ಫೀಲ್ಡಿಗಿಳಿದು ಡೆಂಗ್ಯೂ ಕುರಿತಾಗಿ ನಿರಂತರ ಜಾಗೃತಿಯನ್ನು ಮೂಡಿಸಿದ್ದರು. ಪರಿಸರವನ್ನು ಸ್ವಚ್ಛವಾಗಿಡುವಂತೆ ಎಚ್ಚರಿಸುತ್ತಲೇ ಬಂದಿದ್ದರು. ಇದು ಮಾತ್ರವಲ್ಲದೆ, ಮರಳುಗಾರಿಕೆಯ ವಿಚಾರ, ಜಿಲ್ಲೆಯನ್ನು ಕಾಡಿದ್ದ ನೆರೆಯ ವಿಚಾರ ಅಲ್ಲದೆ, ಬೇಸಿಗೆ ಕಾಲದಲ್ಲಿ ಎದುರಾಗುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಹೀಗೆ ಹತ್ತು ಹಲವು ವಿಚಾರಗಳನ್ನು ಸೂಕ್ಷ್ಮವಾಗಿ ವಿವೇಚಿಸಿ ಸೂಕ್ತ ಪರಿಹಾರೋಪಯಗಳನ್ನು ಕಂಡುಕೊಳ್ಳುವ ಮೂಲಕ ಜನಮನ ಗೆದ್ದಿದ್ದರು.
ಇಷ್ಟೆಲ್ಲಾ ಸಾಮಾರ್ಥ್ಯ ಹೊಂದಿದ್ದ ಸಸಿಕಾಂತ್ ಸೆಂಥಿಲ್ ಇಂದು ಸ್ಥಾಪಿತ ಹಿತಾಸಕ್ತಿಗಳ ಸ್ವಾರ್ಥ ದಾಹಕ್ಕೆ ಬಲಿಪಶುವಾಗಿದ್ದು, ತಮ್ಮ ಹುದ್ದೆಯನ್ನೇ ತೊರೆಯುವಂತಾಗಿದೆ. ರಾಜಕೀಯ ಪಕ್ಷಗಳು ಹಾಗೂ ಕಾಣದ ಕೈಗಳಂತೆ ಜಿಲ್ಲೆಯಲ್ಲಿ ಬೇರೂರಿರುವ ಮಾಫಿಯಾಗಳ ಒತ್ತಡದಿಂದಾಗಿ ಅವರನ್ನು ಈ ಹಂತದಲ್ಲಿ ತಂದು ನಿಲ್ಲಿಸಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಸಸಿಕಾಂತ್ ಸೆಂಥಿಲ್ ರಾಜೀನಾಮೆ ಸಂದರ್ಭ ನೀಡಿರುವ ಕಾರಣ, ಸದ್ಯ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಇದರಿಂದ ಮುಂದೆ ಎದುರಗಬಹುದಾದ ಆಪತ್ತುಗಳು. ಒಬ್ಬ ಐಎಎಸ್ ಅಧಿಕಾರಿ ನೀಡಿರುವ ಕಾರಣವಿದು. ಆದರೆ ಅವರಿಗೂ ಮುನ್ನ ಕೇರಳದ ಐಎಎಸ್ ಅಧಿಕಾರಿ ಕಣ್ಣನ್ ಕೂಡ ಇದೇ ಕಾರಣವನ್ನು ಮುಂದಿಟ್ಟುಕೊಂಡು ತಮ್ಮ ಸ್ಥಾನವನ್ನು ತೊರೆದಿದ್ದರು. ಇವರಿಗೂ ಮೊದಲು ಕಾಶ್ಮೀರದ ಶಾ ಫೈಶಲ್ ಕೂಡ ರಾಜೀನಾಮೆ ಸಲ್ಲಿಸಿದ್ದರು.
ಇನ್ನು ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ದೇಶದೆಲ್ಲೆಡೆ ಗುರುತಿಸಿಕೊಂಡಿದ್ದ ಸಿಂಗಂ ಖ್ಯಾತಿಯ ಅಣ್ಣಾಮಲೈ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆ ಸಂದರ್ಭದಲ್ಲೂ ಪರ ವಿರೋಧ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ, ಅವರು ತಮ್ಮ ನಿಲುವಿನಿಂದ ಹಿಂದೆ ಸರಿದಿರಲಿಲ್ಲ.
ಇಷ್ಟೆಲ್ಲ ವಿಚಾರಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿವೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದವರು ನಾವೆಲ್ಲರು ಮೌನವಾಗಿಯೇ ಇವೆಲ್ಲ ವಿಚಾರಗಳನ್ನು ಅವಲೋಕಿಸುತ್ತಿದ್ದೇವೆ. ಮಾತಿನಲ್ಲಿ ಮಾತ್ರವೇ ಖಂಡಿಸುತ್ತಿದ್ದೇವೆ. ಜನಸಾಮಾನ್ಯನಿಂದ ಆಕ್ರೋಶದ ಮಾತುಗಳು ವ್ಯಕ್ತವಾಗುತ್ತವೆ. ಆದರೆ, ಜನರ ನಾಯಕರೆಂಬ ವೇಷ ಧರಿಸಿದವರು, ತಮಗೂ ಈ ವಿಚಾರಗಳಿಗೂ ಯಾವುದೇ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಈ ವಿಚಾರಗಳ ಕುರಿತಂತೆ ಮೊಸಳೆ ಕಣ್ಣಿರೂ ಹಾಕುವುದು ಹಾಗೂ ಅಧಿಕಾರಿಗಳು ಕೈಗೊಂಡ ಕ್ರಮಗಳು ಸರಿಯಲ್ಲ ಎನ್ನುವ ಹೇಳಿಕೆಯನ್ನು ನೀಡಿ ಈ ವಿಚಾರಗಳಿಂದ ನುಣುಚಿಕೊಳ್ಳುತ್ತಾರೆ.
ಆದರೆ, ನೈಜ ಕಾಳಜಿ ಇದ್ದಲ್ಲಿ ಅಂತಹ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆಸಿ ಅವರ ಅಸಮಾಧಾನದ ಕಾರಣಗಳ ಬಗ್ಗೆ ಚರ್ಚಿಸಿ ಅಧಿಕಾರಿಗಳ ರಾಜೀನಾಮೆ ಹಿಂಪಡೆಯುವ ಬಗ್ಗೆ ಮನವೊಲಿಸಬೇಕಾಗಿತ್ತು. ಆದರೆ, ಈ ಕಾರ್ಯಕ್ಕೆ ಯಾವೊಬ್ಬರು ಮುಂದಾಗಿಲ್ಲ.
ಇಂದಿನ ಕಾಲಘಟ್ಟದಲ್ಲಿ ದೇಶದೆಲ್ಲೆಡೆ ಪ್ರಾಮಾಣಿಕರಿಗೆ ಬೆಲೆಯೇ ಇಲ್ಲದಂತಾಗಿದೆ. ಪ್ರಾಮಾಣಿಕರಿಗೆ ಉಳಿಗಾಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸ್ವಾರ್ಥ ಸಾಧನೆಯ ಮುಂದೆ ಸ್ಬಾಭಿಮಾನದ ಮೌಲ್ಯ ಕುಸಿದಿದೆ. ಈ ಪರಿಸ್ಥಿತಿ ಮುಂದುವರೆದಲ್ಲಿ ಮುಂದಿನ ಜೀವನ ನಿರ್ವಹಣೆ ಹೇಗೆ ಎಂಬ ಆತಂಕ ಸ್ವತಂತ್ರ ಭಾರತದಲ್ಲಿ ಜನತೆಗೆ ಕಾಡಲಾರಂಭಿಸಿದೆ.