ಮಂಗಳೂರು ಡಿ 27 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ಮತ್ತೆ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ದೋಹಾಕ್ಕೆ ಹೊರಟಿದ್ದ ವಿಮಾನ ಏರ್ ಇಂಡಿಯಾ ವಿಮಾನ ಟೇಕಫ್ ಆಗಿ ತಾಂತ್ರಿಕ ದೋಷ ಕಾಣಿಸಿಕೊಂಡು ಕೇವಲ ಅರ್ಧ ತಾಸಿನಲ್ಲಿ ಮರಳಿ ಬಂದ ಘಟನೆ ಮರೆಯುವ ಮುನ್ನವೇ ಇದೀಗ ಮತ್ತೊಂದು ಪ್ರಯಾಣಿಕರನ್ನು ಹೊತ್ತ ಮತ್ತೊಂದು ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೌದು 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಮುಂಬಯಿಗೆ ಹಾರಲು ಸಿದ್ಧವಾಗಿದ್ದ ಜೆಟ್ ಏರ್ವೇಸ್ ವಿಮಾನ ಯಾನ ತಾಂತ್ರಿಕ ದೋಷ ದಿಂದಾಗಿ ರದ್ದುಪಡಿಸಿದ ಘಟನೆ ಡಿ 27 ರ ಮಂಗಳ ವಾರ ನಡೆದಿದೆ. ವಿಮಾನ ಟೇಕಾಫ್ ಗಾಗಿ ಅಂತಿಮ ಕ್ಷಣದ ಸಿದ್ಧತೆ ನಡೆಸುತ್ತಿದ್ದಾಗ ತಾಂತ್ರಿಕ ದೋಷ ಕಂಡು ಬಂದಿರುವುದು ಗಂಭೀರ ವಿಚಾರ. ಆದರೆ ಇಲ್ಲಿ ಪೈಲಟ್ ಸಮಯ ಪ್ರಜ್ಞೆಯಿಂದಾಗಿ, ಟೇಕಾಫ್ ನಡೆಸುವುದಕ್ಕೆ ಮೊದಲೇ ತಾಂತ್ರಿಕ ದೋಷ ಗಮನಕ್ಕೆ ಬಂದಿರುವುದರಿಂದ ಸಂಭವನೀಯ ಅಪಾಯ ತಪ್ಪಿದೆ. ಜೆಟ್ ಏರ್ ವೇಸ್ ವಿಮಾನ ನಿನ್ನೆ ಬೆಳಗ್ಗೆ 11.15ಕ್ಕೆ ಮುಂಬಯಿಗೆ ಹಾರಬೇಕಿತ್ತು. ರನ್ ವೇ ಯಲ್ಲಿ ಸ್ವಲ್ಪ ವಿಮಾನ ಮುಂದಕ್ಕೆ ಚಲಿಸಿದಾಗ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ಹೆಚ್ಚುವರಿ ಹತ್ತು ನಿಮಿಷಗಳ ಕಾಲ ಅವಕಾಶ ಕೇಳಿದ್ದಾರೆ. ಆದರೆ ಸತತ ಪ್ರಯತ್ನದ ಬಳಿಕವೂ ತಾಂತ್ರಿಕ ಸಮಸ್ಯೆ ಪರಿಹಾರವಾಗದ ಹಿನ್ನಲೆಯಲ್ಲಿ ವಿಮಾನದ ಹಾರಾಟ ವನ್ನೇ ರದ್ದುಪಡಿಸಲಾಯಿತು. ಹಾರಾಟ ರದ್ದಾದ ಕಾರಣ ವಿಮಾನ ಪ್ರಯಾಣಿಕರೆಲ್ಲರೂ ಸಂಜೆಯವೆರೆಗೆ ನಿಲ್ದಾಣದಲ್ಲಿಯೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಸಾಂದರ್ಭಿಕ ಚಿತ್ರ