ಮಂಗಳೂರು, ಸೆ 06 (Daijiworld News/MSP): ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ರಾಜೀನಾಮೆ ಕೊಟ್ಟಿರುವ ವಿಚಾರ ಆಘಾತ ತರಿಸಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ರಾಜೀನಾಮೆಯ ವಿಚಾರವಾಗಿ ಈಗಾಗಲೇ ನಾನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಲ್ಲಿ ಮಾತನಾಡಿದ್ದೇನೆ. ನಾನು ಕೂಡ ರಾಜೀನಾಮೆ ವಿಚಾರವಾಗಿ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ, ರಾಜೀನಾಮೆಯನ್ನು ಹಿಂಪಡೆಯಬೇಕು. ಒಂದು ವೇಳೆ ರಾಜೀನಾಮೆ ಹಿಂಪಡೆಯುವುದಾದರೆ ಜಿಲ್ಲಾಧಿಕಾರಿಯವರಿಗೆ ಮತ್ತೆ ಕಾರ್ಯ ನಿರ್ವಹಿಸಲು ಸರ್ಕಾರದ ವತಿಯಿಂದ ಪೂರ್ಣ ರೀತಿಯ ಸಹಕಾರ ಕೊಡುವ ಭರವಸೆ ನೀಡಿದ್ದೇವೆ ಎಂದು ಹೇಳಿದರು.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕೂಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಬಳಿ ಮಾತನಾಡುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿಗಳ ಕಚೇರಿಯಿಂದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ನಿರ್ಣಯ ಬದಲಿಸಲು ಕರೆ ಬಂದಿದೆ ಎಂದು ತಿಳಿಸಿದರು. ನನ್ನ ಬಳಿ ಮಾತನಾಡಿದಾಗ ವೈಯಕ್ತಿಕ ವಿಚಾರದಿಂದ ರಾಜೀನಾಮೆ ಕೊಟ್ಟಿರುವುದು. ಮಾತ್ರವಲ್ಲ, ಅವರು ಈಗಾಗಲೇ ಬರೆದಿರುವ ಪತ್ರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು,ಸರ್ಕಾರ ರಾಜೀನಾಮೆಗೆ ಹೊಣೆಯಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷ ಈ ವಿಚಾರವನ್ನು ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ರಾಜೀನಾಮೆ ವಿಚಾರದಲ್ಲಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಆಡಳಿತದ ಅವಧಿಯಲ್ಲಿ ಅನೇಕ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಗಣಪತಿ, ರವಿ ಅವರು ಆತ್ಮಹತ್ಯೆ ಮಾಡಿಕೊಂಡ ವಿಚಾರವನ್ನು ಒಮ್ಮೆ ಕಾಂಗ್ರೆಸ್ ನೆನಪಿಸಲಿ. ದಕ್ಷ ಅಧಿಕಾರಿಯಾಗಿದ್ದ ಅಣ್ಣಮಲೈ ಅವರ ರಾಜಿನಾಮೆ ಸಂದರ್ಭದಲ್ಲಿ ಯಾಕೆ ಕಾಂಗ್ರೇಸ್ ಮೌನವಹಿಸಿತ್ತು, ಯಾಕೆ ಮಾಧ್ಯಮದ ಮುಂದೆ ಬರಲಿಲ್ಲ ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ತಮ್ಮ ಅಧಿಕಾರದ ಅವಧಿಯಲ್ಲಿ ಆಗಿರುವ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಮತ್ತೆ ಇನ್ನೊಂದು ಪಕ್ಷದ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.