ಕುಂದಾಪುರ,ಸೆ 06 (Daijiworld News/RD): ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ಶೀಘ್ರವಾಗಿ ಜಾರಿ ಮಾಡುವಂತೆ ಬೈಂದೂರು ಯುವ ಕಾಂಗ್ರೆಸ್ ಘಟಕ ಆಗ್ರಹಿಸಿದೆ.
ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಬೈಂದೂರು ತಹಸೀಲ್ದಾರ್ ಮೂಲಕ ಮನವಿಯನ್ನೂ ನೀಡಿದೆ. ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಯಾವುದೇ ಪರವಾನಿಗೆ ನೀಡದೇ ಇರುವುದರಿಂದ ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಮರಳುಗಾರಿಕೆ, ಕಟ್ಟಡ ನಿರ್ಮಾಣ ಮೊದಲಾದ ವೃತ್ತಿಗಳನ್ನು ಅವಲಂಭಿಸಿರುವ ಸಾವಿರಾರು ಜನ ಕೂಲಿ ಕಾರ್ಮಿಕರು ದಿನನಿತ್ಯ ಜೀವನ ನಡೆಸುವುದೇ ದುಸ್ತರವಾಗಿದೆ. ಮರಳುಗಾರಿಕೆ ಸ್ಥಗಿತಗೊಂಡಿರುವುದರಿಂದ ಸರ್ಕಾರದ ಯೋಜನೆಗಳಾದ ಆಶ್ರಯ ಯೋಜನೆ, ಅಂಬೇಡ್ಕರ್ ಯೋಜನೆ, ಬಸವ ವಸತಿ ಯೋಜನೆ, ಮೀನುಗಾರಿಕಾ ಮನೆಗಳನ್ನು ನಿರ್ಮಿಸಲೂ ಅಸಾಧ್ಯವಾಗಿದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮರಳುಗಾರಿಕೆಗೆ ಅವಕಾಶ ನೀಡಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಮಾತ್ರ ಮರಳುಗಾರಿಕೆಗೆ ಸರ್ಕಾರ ಅವಕಾಶ ನೀಡುತ್ತಿಲ್ಲ. ಇದು ಅತ್ಯಂತ ದುಃಖಕರ ಸಂಗತಿಯಾಗಿದ್ದು, ಜಿಲ್ಲೆಯ ಜನರಿಗೆ ಅತೀ ಶೀಘ್ರದಲ್ಲಿ ಮರಳುಗಾರಿಕೆಗೆ ಅವಕಾಶ ನೀಡಬೇಕು. ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಬೈಂದೂರು ಯುವ ಕಾಂಗ್ರೆಸ್ ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಶುಕ್ರವಾರ ಬೈಂದೂರು ತಹಸೀಲ್ದಾರ್ ಕಚೇರಿಯಲ್ಲಿ ಮನವಿ ನಿಡಲಾಯಿತು. ಈ ಸಂದರ್ಭ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ, ಸತೀಶ್ ಶೆಟ್ಟಿ ಉಪ್ರಳ್ಳಿ, ಸುರೇಶ ಹೋಬಳಿದಾರ್, ಗಣೇಶ್ ಪೂಜಾರಿ ಬೈಂದೂರು, ಕಾರ್ಮಿಕ ಘಟಕ ಅಧ್ಯಕ್ಷ ಮಂಜುನಾಥ ಪೂಜಾರಿ, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ತಬ್ರೆಜ್ ನಾಗೂರು, ಲಕ್ಷ್ಮಣ ಯಡ್ತರೆ, ಮಾಣಿಕ್ಯ ಹೋಬಳಿದಾರ್, ವಿಜಯ ನಾಗೂರು, ಶಬ್ಬೀರ್ ಬೈಂದೂರು, ಹರೀಶ್ ಮರವಂತೆ, ಉದಯ ಪೂಜಾರಿ, ರಾಮಚಂದ್ರ ಹೊಸ್ಕೊಟೆ, ಸೋಮಶೇಖರ್ ಉಪ್ಪುಂದ ಹಾಜರಿದ್ದರು.