ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಕುಟುಂಬ ಸದಸ್ಯರು ಭೇಟಿ ಮಾಡಿರುವುದರ ಬಗ್ಗೆ ವಿದೇಶಾಂಗ ಸಚಿವಾಲಯ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದೆ ಇದರಲ್ಲಿ ಪಾಕ್ ಅತ್ಯಂತ ನಿಷ್ಟುರವಾಗಿ ನಡೆದುಕೊಂಡಿದ್ದು ಬೆಳಕಿಗೆ ಬಂದಿದೆ. ಕುಲಭೂಷಣ್ ಜಾಧವ್ ಗೆ ತಾಯಿಯೊಂದಿಗೆ ಮಾತೃ ಭಾಷೆಯಲ್ಲಿ ಮಾತನಾಡಲು ಪಾಕ್ ಅಧಿಕಾರಿಗಳು ಅನುಮತಿ ನಿರಾಕರಣೆ ಮಾಡಿದ್ದು, ಪಾಕಿಸ್ತಾನದ ಅಧಿಕಾರಿಗಳು ಭೇಟಿಯ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಜಾಧವ್ ಅವರನ್ನು ಗಮನಿಸಿದಾಗ ಅವರ ಆರೋಗ್ಯ ಚೆನ್ನಾಗಿರುವುದರ ಬಗ್ಗೆ ಅನುಮಾನ ಮೂಡಿಸುತ್ತವೆ. ಕುಟುಂಬ ಸದಸ್ಯರೊಂದಿಗಿನ ಮಾತುಕತೆ ವೇಳೆಯಲ್ಲಿಯೂ ಅವರ ಮಾತುಗಳು ತರಬೇತುಗೊಳಿಸಿದಂತೆಯೇ ಇತ್ತು. ಮುಕ್ತವಾಗಿ ಮಾತನಾಡಲು ಹೆದರಿಕೆ ಮತ್ತು ಒತ್ತಡದಲ್ಲಿಯೇ ಜಾಧವ್ ಮಾತನಾಡಿದ್ದು ಸ್ಪಷ್ಟವಾಗಿತ್ತು ಎಂದು ಹೇಳಿದ್ದಾರೆ. ಭೇಟಿಗೂ ಮುನ್ನ ಜಾಧವ್ ಪತ್ನಿ ಅವರ ಬಿಂದಿ, ಮಂಗಳಸೂತ್ರ, ಚಪ್ಪಲಿಗಳನ್ನು ತೆಗೆಸಿದ್ದರು. ವಾಪಸ್ ಹೊರಡುವ ವೇಳೆ ಜಾಧವ್ ಪತ್ನಿ ಪಾದರಕ್ಷೆಗಳನ್ನು ವಾಪಸ್ ನೀಡುವಂತೆ ಕೇಳಿದರೂ ಕೊಡಲಿಲ್ಲ ಎಂದು ವಿದೇಶಾಂಗ ಇಲಾಖೆ ಹೇಳಿದೆ.