ಮಂಗಳೂರು, ಸೆ.06(Daijiworld News/SS): ಕರಾವಳಿಯಲ್ಲಿ ಕಳೆದ ಕೆಲ ದಿನಗಳಿಂದ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಬಿರುಸುಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಉತ್ತಮ ಮಳೆಯಾಗುತ್ತಿದೆ.
ಘಟ್ಟ ಪ್ರದೇಶ ಹಾಗೂ ತಪ್ಪಲಿನ ಬೆಳ್ತಂಗಡಿ, ಸುಳ್ಯ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ನೇತ್ರಾವತಿ, ಕುಮಾರಧಾರ, ಗುಂಡ್ಯ ನದಿಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಪಶ್ಚಿಮಘಟ್ಟ ಮತ್ತು ತಪ್ಪಲು ಪ್ರದೇಶದಲ್ಲಿ ನಿರಂತರ ಧಾರಾಕಾರ ಮಳೆಯಾಗುತ್ತಿದ್ದು, ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸ್ನಾನಘಟ್ಟ ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ. ಸುಬ್ರಹ್ಮಣ್ಯ, ಬೆಳ್ತಂಗಡಿ, ಕಡಬ ಪ್ರದೇಶಗಳ ಬಹುಭಾಗ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲೂ ಧಾರಾಕಾರ ಮಳೆ ಸುರಿದಿದೆ. ಮಳೆ ಹಾಗೂ ಗಾಳಿಯಿಂದಾಗಿ ಬೈಂದೂರು ತಾಲೂಕಿನಲ್ಲಿ ಕೆಲವು ಮನೆ ಮತ್ತು ಕೃಷಿಗೆ ಹಾನಿಯಾಗಿದೆ.
ಸೆ.6ರಿಂದ 9ರ ತನಕ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಕೂಡ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಕಾಸರಗೋಡು ಸಹಿತ ಕೇರಳಾದ್ಯಂತ ಮೂರು ದಿನ ಬಿರುಸಿನ ಮಳೆ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಸೆ.6ರಿಂದ 8ರವರೆಗೆ ಕಾಸರಗೋಡು, ಕಣ್ಣೂರು ಮತ್ತಿತರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.