ಕುಂದಾಪುರ,ಸೆ 05 (Daijiworld News/RD): 2017 ರ ಬ್ಯಾಚಿನ ಐಪಿಎಸ್ ಅಧಿಕಾರಿ 29 ರ ಹರೆಯದ ಹರಿರಾಂ ಶಂಕರ್ ಕುಂದಾಪುರ ಉಪವಿಭಾಗದ ನೂತನ ಎಎಸ್ಪಿ ಆಗಿ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಕುಂದಾಪುರದ ಡಿವೈಎಸ್ಪಿ ಕಚೇರಿಯಲ್ಲಿ ನಿರ್ಗಮನ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಅವರು ಹರಿರಾಂ ಶಂಕರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಕೇರಳದ ತ್ರಿಶೂರ್ ಮೂಲದ ಹರಿರಾಂ ಶಂಕರ್ ತರಬೇತಿ ಮುಗಿಸಿದ ಬಳಿಕ ಬೆಳಗಾಂನ ಅಥಣಿಯಲ್ಲಿ ಪ್ರೊಬೇಶನರಿ ಎಎಸ್ಪಿಯಾಗಿ ಸೇವೆಗೆ ಸೇರಿದ್ದರು. ಬಳಿಕ ಎರಡು ತಿಂಗಳು ಹೈದರಬಾದಿನಲ್ಲಿ ಎರಡನೇ ಹಂತದ ತರಬೇತಿ ಮುಗಿಸಿ ಕುಂದಾಪುರ ಎಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಕ್ಯಾಲಿಕಟ್ ಎನ್.ಐ.ಟಿ.ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ವ್ಯಾಸಂಗ ಮಾಡಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದಿದ್ದರು. ಇದೀಗ ಕುಂದಾಪುರ ಉಪವಿಭಾಗಕ್ಕೆ ಐಪಿಎಸ್ ಅಧಿಕಾರಿ ಅಧಿಕಾರ ವಹಿಸಿರುವುದು ಕರಾವಳಿಗರ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎನ್ನುವ ನಂಬಿಕೆ ಸ್ಥಳೀಯರದ್ದು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಹರಿರಾಂ, ತನ್ನ ಕ್ಷೇತ್ರ ವ್ಯಾಪ್ತಿಯ ಬಗ್ಗೆ ಅಧ್ಯಯನ ನಡೆಸುವೆ. ಇಲ್ಲಿನ ಅಧಿಕಾರಿಗಳು ಉತ್ತಮ ಕಾರ್ಯನಿರ್ವಹಣೆ ಮಾಡಿದ್ದು, ಶಾಂತಿ ನೆಲೆಸಿದೆ. ಕಾನೂನು ಸುವ್ಯವಸ್ಥೆಗಳನ್ನು ಇನ್ನಷ್ಟು ಬಲಪಡಿಸುವುದು, ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇನ್ನೂ ಪತ್ತೆಯಾಗದಿರುವ ಕೊಲೆ, ಕಳ್ಳತನ ಮೊದಲಾದ ಅಪರಾಧ ಚಟುವಟಿಕೆಗಳ ಬಗ್ಗೆ ಮರು ಪರಿಶೀಲನೆ ನಡೆಸಲಾಗುತ್ತದೆ. ಸಂಚಾರಿ ಸಮಸ್ಯೆಗಳ ಬಗ್ಗೆಯೂ ಗಮನಹರಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಪಡಲಾಗುತ್ತದೆ ಎಂದರು.
ಈ ಸಂದರ್ಭ ಕುಂದಾಪುರ ಸಿಪಿಐ ಮಂಜಪ್ಪ, ಬೈಂದೂರು ಸಿಪಿಐ ಪರಮೇಶ್ವರ್ ಗುನಗ, ವಿವಿಧ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿಗಳು ಇದ್ದರು.