ಮಂಗಳೂರು,ಸೆ 05 (Daijiworld News/RD): ಕರಾವಳಿಯ ಜೀವನದಿ ನೇತ್ರಾವತಿಯಾಗಿದ್ದು, ಸರ್ಕಾರ ಎತ್ತಿನಹೊಳೆ ಯೋಜನೆಯನ್ನು ರೂಪಿಸಿದ್ದು, ಈ ನದಿಯ ಉಳಿವಿಗಾಗಿ ಜಿಲ್ಲೆಯಲ್ಲಿ ಸಾಕಷ್ಟು ಹೋರಾಟ ನಡೆಯುತ್ತಿದ್ದು, ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಗುರುವಾರದಿಂದ ವಿಚಾರಣೆ ಆರಂಭವಾಗಲಿದೆ.
ಎತ್ತಿನಹೊಳೆ ಯೋಜನೆಯ ವಿರುದ್ಧ ಪರಿಸರವಾದಿಗಳು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಹಸಿರು ನ್ಯಾಯ ಪೀಠ (ಎನ್ಜಿಟಿ)ವು ಮೇಯಲ್ಲಿ ವಜಾಗೊಳಿಸಿ ತೀರ್ಪು ನೀಡಿತ್ತು. ಎನ್ಜಿಟಿ ಪೀಠದ ತೀರ್ಪು ಪ್ರಶ್ನಿಸಿ ಪರಿಸರ ಹೋರಾಟಗಾರ ಕೆ.ಎನ್. ಸೋಮಶೇಖರ್ ಒಂದು ತಿಂಗಳ ಹಿಂದೆಯಷ್ಟೇ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ನ್ಯಾಯಪೀಠವು ಈ ಬಗ್ಗೆ ಗುರುವಾರ ವಿಚಾರಣೆ ಆರಂಭಿಸಲಿದೆ. ಇದರೊಂದಿಗೆ ಪಶ್ಚಿಮ ಘಟ್ಟದ ಜೀವ ವೈವಿಧ್ಯಕ್ಕೆ ಧಕ್ಕೆಯುಂಟು ಮಾಡುತ್ತಿರುವ ಎತ್ತಿನಹೊಳೆ ನೀರಾವರಿ ಯೋಜನೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯ ದಲ್ಲಿ ಮಹತ್ವದ ಕಾನೂನು ಹೋರಾಟ ಪ್ರಾರಂಭವಾಗಲಿದೆ.
ಎತ್ತಿನಹೊಳೆ ಕಾಮಗಾರಿಗೆ ಸಂಬಂಧಿಸಿದಂತೆ ಪಶ್ಚಿಮ ಘಟ್ಟ ಪ್ರದೇಶಗಳ ಅರಣ್ಯ ನಾಶವಾಗುತ್ತಿದೆ ಎಂಬುವುದನ್ನು ಪ್ರಶ್ನಿಸಿ ಎನ್ಜಿಟಿ ಮುಂದೆ ಸೋಮಶೇಖರ್ ಮತ್ತು ಸಕಲೇಶಪುರದ ವಕೀಲ ಕಿಶೋರ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಕುಡಿಯುವ ನೀರಿನ ಯೋಜನೆಯಾಗಿರುವ ಹಿನ್ನೆಲೆಯಲ್ಲಿ ಇತರ ಆಕ್ಷೇಪಗಳು ಪರಿಗಣನೆಗೆ ಬರುವುದಿಲ್ಲವಾದ್ದರಿಂದ ಅರ್ಜಿ ಮತ್ತು ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸುವುದಾಗಿ ನ್ಯಾಯಪೀಠ ಮೂರು ತಿಂಗಳ ಹಿಂದೆ ಆದೇಶ ಹೊರಡಿಸಿತ್ತು. ಎನ್ಜಿಟಿ ನೀಡಿರುವ ಈ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟಿನ ಮೊರೆಹೋಗಿದ್ದಾರೆ.