ಮಂಗಳೂರು, ಸೆ 04 (DaijiworldNews/SM): ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಕಾಟ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಜಿಲ್ಲೆಯನ್ನೇ ತಲ್ಲಣಗೊಳಿಸಿದ ಡೆಂಗ್ಯೂ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿದೆ. ಈ ನಡುವೆ ಇದೀಗ ಮತ್ತೊಂದು ರೋಗ ಬಾಧೆ ಜಿಲ್ಲೆಯನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ ಇದೀಗ ಇಲಿ ಜ್ವರದ ಭೀತಿ ಹೆಚ್ಚಾಗಿದೆ.
ಮಂಗಳೂರು ನಗರವೊಂದರಲ್ಲೇ ಜುಲೈ ತಿಂಗಳಲ್ಲಿ ಇಲಿಜ್ವರದ 17 ಪ್ರಕರಣಗಳು ಪತ್ತೆಯಾಗಿವೆ. ಇಲಿ ಜ್ವರ ಒಂದು ನಿಗದಿತ ಪ್ರದೇಶದಲ್ಲಿ ಹರಡದೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಮಲೇರಿಯಾ, ಇಲಿಜ್ವರ ಪ್ರಕರಣಗಳು ವರದಿಯಾಗುತ್ತಿವೆ. ಇಲಿಜ್ವರ ಲೆಪ್ಟೋಸ್ಪೈರ ಎಂಬ ಸೂಕ್ಷ್ಮಾಣು ಜೀವಿಗಳಿಂದ ಉಂಟಾಗುವ ರೋಗವಾಗಿದೆ. ಈ ರೋಗಾಣು ಪ್ರಾಣಿಗಳ ಮೂತ್ರದಲ್ಲಿದ್ದು, ಇಂತಹ ಸೋಂಕು ದೇಹವನ್ನು ಸೇರಿ ಮನುಷ್ಯರಿಗೆ ಕಾಯಿಲೆ ಹರಡುತ್ತದೆ ಎಂದು ಜಿಲ್ಲಾ ಆರೋಗ್ಯ ಸರ್ವೇಕ್ಷೇಣಾಧಿಕಾರಿ ಡಾ. ಪ್ರವೀಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಸಾರ್ವಜನಿಕರು ಜಾಗೃತರಾಗಬೇಕು. ತಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು. ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು. ನಿಂತ ನೀರನ್ನು ಹರಿದು ಹೋಗುವಂತೆ ಮಾಡಬೇಕು. ಅಲ್ಲದೆ, ಯಾವುದೇ ಪ್ರದೇಶದಲ್ಲಿ ನೀರು ಸಂಗ್ರಹವಾಗಿದ್ದರೆ, ಅವುಗಳಲ್ಲಿ ಕೈಕಾಲು ಮುಳುಗಿಸುವುದನ್ನು ತಪ್ಪಿಸಬೇಕು. ಆ ಮೂಲಕ ಸಾಂಕ್ರಾಮಿಕ ರೋಗದಿಂದ ದೂರ ಇರುವಂತೆ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.