ಕಾರ್ಕಳ, ಸೆ 04 (DaijiworldNews/SM): ಶಸ್ತ್ರಸಜ್ಜಿತಧಾರಿಗಳ ತಂಡ ಮನೆಯೊಂದಕ್ಕೆ ನುಗ್ಗಿ ಮನೆಯಲ್ಲಿದ್ದವರಿಗೆ ಜೀವಬೆದರಿಕೆಯೊಡ್ಡಿ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣವನ್ನು ಕಳವುಗೈದ ಘಟನೆ ಕಾರ್ಕಳ ತಾಲೂಕಿನ ಇರ್ವತ್ತೂರು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಇರ್ವತ್ತೂರು ಕೊಳಕೆ ನಂದಗೋಕಲು ಮನೆಯಲ್ಲಿ ಈ ಘಟನೆ ನಡೆದಿದ್ದು, ಹರೀಶ್ ಭಟ್ ಎಂಬವರ ಮನೆಯಿಂದ ಕಳ್ಳತನ ನಡೆದಿದೆ. ಸಪ್ಪೆಂಬರ್ 3ರ ರಾತ್ರಿ 9 ಗಂಟೆಗೆ ಪತ್ನಿ ಶ್ರೀಲಕ್ಷ್ಮಿ ರವರ ಜೊತೆ ತನ್ನ ಮನೆಯಲ್ಲಿ ಟಿ.ವಿ. ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಮನೆಯ ಬಾಗಿಲ ಬಳಿಯಲ್ಲಿ ಯಾರೋ ಭಟ್ರೆ ಎಂದು ಕರೆದಿದ್ದರು. ಅದನ್ನು ಗಮನಿಸಿದ ಹರೀಶ್ಭಟ್ ಅಡುಗೆ ಮನೆಯ ಬಾಗಿಲು ತೆಗೆದಾಗ ಓರ್ವನು ಹೊರಗೆ ನಿಂತುಕೊಂಡು ಕೊಂಡಿದ್ದನು. ಕೂಡಲೇ ಆತ ಮನೆಯ ಒಳಗೆ ಅಕ್ರಮವಾಗಿ ಪ್ರವೇಶಿಸಿ ಬಾಗಿಲು ತೆರೆದ ಹರೀಶ್ ಭಟ್ ಅವರ ಕುತ್ತಿಗೆ ಒತ್ತಿ ಹಿಡಿದು ಬೊಬ್ಬೆ ಹಾಕಬೇಡ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಕ್ಷಣ ಮಾತ್ರದಲ್ಲಿ ಹೊರಗಿದ್ದ ಇತರ ಮೂವರು ಮನೆಯೊಳಗಡೆ ಅಕ್ರಮವಾಗಿ ಪ್ರದೇಶಿಸಿ ಲಕ್ಷ್ಮೀ ಅವರನ್ನು ಒತ್ತಿ ಹಿಡಿದರು. ತಾವು ತಂದಿದ್ದ ಪ್ಲಾಸ್ಟಿಕ್ ಹಗ್ಗದಲ್ಲಿ ದಂಪತಿಗಳ ಕೈ, ಕಾಲುಗಳನ್ನು ಕಟ್ಟಿ ಹಾಕಿ ದಮ್ ಇದ್ದರೆ ಕಿರುಚಾಡಿ ಎಂದು ದಮ್ಕಿ ಹಾಕಿದರು. ಆರೋಪಿಗಳ ಪೈಕಿ ಓರ್ವನು ತನ್ನಲ್ಲಿ ಇದ್ದ ಪಿಸ್ತೂಲನ್ನು ಹರೀಶ್ ಭಟ್ ಅವರ ಮುಖಕ್ಕೆ ಗುರಿ ಹಿಡಿದು ಬೊಬ್ಬೆ ಹಾಕಿದರೆ ಶೂಟ್ ಮಾಡಿ ಸಾಯಿಸುತ್ತೇನೆ ಎಂದು ಬೆದರಿಸಿದ್ದ.
ಅದೇ ಸಂದರ್ಭದಲ್ಲಿ ಮನೆಯೊಡತಿ ಶ್ರೀಲಕ್ಷೀ ಬೊಬ್ಬೆ ಹೊಡೆದಿದ್ದು, ಅವರ ಬಾಯಿಗೆ ಆರೋಪಿಯೊಬ್ಬ ಬಟ್ಟೆ ತುರುಕಿಸಿದ್ದಾನೆ. ಅವರಲ್ಲಿ ಇಬ್ಬರು ಮನೆಯ ಒಳಗಡೆ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು ೩ ಪವನ್ ತೂಕದ ಚಿನ್ನದ ಮಣಿ ಸರ, ಉಂಗುರಗಳು, ಚಿನ್ನದ ಶಿವನ ಪೆಂಡೆಂಟ್, ಚಿನ್ನದ ಕಿವಿಯ ಬೆಂಡೋಲೆ, ನಗದು ಸಹಿತ ಸುಮಾರು 1,26,000 ರೂಪಾಯಿ ಮೌಲ್ಯದ ಚಿನ್ನಾಭರಗಣಗಳನ್ನು ಕದ್ದೊಯ್ದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಕಾರ್ಕಳ ಠಾಣಾ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಶ್ವಾಸದಳ, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.