ಮಂಗಳೂರು, ಸೆ 04 (Daijiworld News/MSP): ಕರಾವಳಿಯಲ್ಲಿ ಸೆ. 4 ರ ಬುಧವಾರ ಉತ್ತಮ ಮಳೆ ಸುರಿದಿದ್ದು, ಇನ್ನೆರಡು ದಿನ ಮಳೆ ತೀವ್ರವಾಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳವಾರ ಸುರಿದ ಮಳೆ ಹಲವೆಡೆ ಹಾನಿ ಉಂಟು ಮಾಡಿದ್ದು, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದ ಚಾರ್ಮಾಡಿ ಭಾಗದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಇನ್ನು ಇದರೊಂದಿಗೆ ಸಮುದ್ರದ ಅಬ್ಬರವೂ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಸೆ.2 ರಿಂದಲೇ ನಾಲ್ಕು ದಿನಗಳವರೆಗೆ ಅರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಅಲರ್ಟ್ ಗುರುವಾರದವರೆಗೆ ಘೋಷಿಸಲಾಗಿದ್ದರೂ, ಮತ್ತೆರಡು ದಿನ ಅಂದರೆ ಸೆ. 6 ರವರೆಗೆ ಮತ್ತೆ ಮಳೆ ತೀವ್ರವಾಗುವುದರಿಂದ ಅರೆಂಜ್ ಅಲರ್ಟ್ ಮುಂದುವರಿಸಲಾಗಿದೆ.
ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಬೆಳ್ತಂಗಡಿ ತಾಲೂಕಿನಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.ನದಿ ಹೊಳೆಗಳು ಉಕ್ಕಿ ಹರಿಯುತ್ತಿದ್ದು ಸ್ಥಳೀಯ ವಾಸಿಗಳು ಆತಂಕಿತರಾಗಿದ್ದಾರೆ.