ಮಂಗಳೂರು, ಸೆ.04(Daijiworld News/SS): ಕರಾವಳಿಯಲ್ಲಿ 4-5 ದಿನಗಳ ಕಾಲ ಸಾಧಾರಣದಿಂದ ಭಾರಿ ಮಳೆಯಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೂಡ ಆರೆಂಜ್ ಅಲರ್ಟ್ ಮುಂದುವರಿಯಲಿದೆ. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ದಟ್ಟ ಮೋಡ ಆವರಿಸಿದ್ದು, ಜಿಲ್ಲೆಯಾದ್ಯಂತ ಸಾಧಾರಣದಿಂದ ಉತ್ತಮ ಮಳೆಯಾಗುತ್ತಿದೆ.
ನಗರದಲ್ಲಿ ಬೆಳಗ್ಗಿನಿಂದಲೇ ಮೋಡ ದಟ್ಟೈಸಿದ್ದು, ಆಗಾಗ ಮಳೆಯಾಗುತ್ತಿದೆ. ಕರಾವಳಿ, ಮಲೆನಾಡಿನಾದ್ಯಂತ ಉತ್ತಮ ಮಳೆ ಸುರಿದಿದ್ದು, ಕೆಲವೆಡೆಗಳಲ್ಲಿ ಹಾನಿಯನ್ನೂ ಉಂಟು ಮಾಡಿದೆ. ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದ ಚಾರ್ಮಾಡಿ ಭಾಗದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಕಡಲಬ್ಬರ ಕೂಡ ಅಧಿಕವಾಗಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ದಿನವಿಡೀ ಆಗಾಗ ಮಳೆ ಸುರಿದಿದೆ. ಕರಾವಳಿಯಲ್ಲಿ ಸೋಮವಾರದಿಂದ ನಾಲ್ಕು ದಿನಗಳವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಅಲರ್ಟ್ ಗುರುವಾರದ ತನಕ ಇರಲಿದ್ದು, ಕರಾವಳಿ ಪ್ರದೇಶದಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಅವಧಿಯಲ್ಲಿ ತಾಸಿಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿಯೂ ಬೀಸಲಿದ್ದು, ಮೀನುಗಾರರು ಎಚ್ಚರದಿಂದ ಇರಬೇಕು ಎಂದು ಇಲಾಖೆ ಸೂಚಿಸಿದೆ.
2-3 ದಿನಗಳಿಂದ ಚಾರ್ಮಡಿ ಘಾಟ್ ಪ್ರದೇಶದಲ್ಲಿ ನಿರಂತರ ಮಳೆಯಾಗಿದ್ದರಿಂದ ನೇತ್ರಾವತಿ ನದಿ ನೀರಿನ ಮಟ್ಟ ಮತ್ತೆ ಏರಿಕೆಯಾಗಿದೆ. ಅಣಿಯೂರು ಹಳ್ಳ, ಸುನಾಳ ಹೊಳೆ, ನೆರಿಯ ಹೊಳೆ, ಎಳನೀರು ಹೊಳೆಗಳು ಚಾರ್ಮಾಡಿ ಘಾಟಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗಿದ್ದು, ಇದರ ತಳಭಾಗದ ಪ್ರದೇಶಗಳಲ್ಲಿ ಮತ್ತೆ ನೆರೆ ಆವರಿಸುವ ಆತಂಕ ಸೃಷ್ಟಿಯಾಗಿದೆ.