ಮಂಗಳೂರು, ಸೆ 3 (Daijiworld News/MSP): ಹಿಂದೂ - ಮುಸ್ಲಿಂ ಬಾಂಧವ್ಯಕ್ಕೆ ಹುಳಿಹಿಂಡಿದ್ದು ಓಟ್ ಬ್ಯಾಂಕ್ ರಾಜಕೀಯ ಎಂದು ಸಂಸದ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ನಳಿನ್ ಅವರನ್ನು ಮುಸ್ಲಿಂ ಸಂಘಟನೆಗಳು ಸೆಪ್ಟೆಂಬರ್ 3 ರ ಮಂಗಳವಾರ ಹೋಟೆಲ್ ಓಷಿಯನ್ ಪರ್ಲ್ ನಲ್ಲಿ ಸನ್ಮಾನಿಸಿತು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಮುಸ್ಲಿಂ ಸಂಘಟನೆಯೊಂದು ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸುತ್ತಿರುವುದನ್ನು ನೋಡಿ ಕೆಲವರು ಬೆರಗಾಗಬಹುದು. ನಾನು 2009ರಿಂದ ಹತ್ತಾರು ಹುದ್ದೆ ಅಲಂಕರಿಸಿದ್ದೇನೆ. ನೂರಾರು ಅಭಿನಂದನೆ ಸ್ವೀಕಾರ ಮಾಡಿದ್ದೇನೆ. ಆದರೆ ಇವತ್ತಿನ ಮುಸ್ಲಿಂ ಭಾಂದವರು ಮಾಡಿದ ಸನ್ಮಾನ ನನ್ನ ಜೀವನದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತದ್ದು ಮತ್ತು ದೀರ್ಘಕಾಲ ನೆನಪಿನಲ್ಲಿರುವಂತದ್ದು ಎಂದು ಹೇಳಿದರು.
ಈ ಸನ್ಮಾನದ ಮೂಲಕ ಮುಸ್ಲಿಂ ಸಂಘಟನೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಾನು ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದಿರುವವನು, ಅಲ್ಲಿ ನಾನು ರಾಷ್ಟ್ರವನ್ನು ಪ್ರೀತಿಸುವುದು ,ಗೌರವಿಸುವುದು ಮತ್ತು ಮನುಷ್ಯರಲ್ಲಿ ಭಗವಂತನನ್ನು ಕಾಣುವುದನ್ನು ಕಲಿತಿದ್ದೇನೆ. ನಾನು ಸಾಮಾನ್ಯ ಬಿಜೆಪಿ ಪ್ರತಿನಿಧಿಯಾಗಿದ್ದೆ 2009 ರಲ್ಲಿ ನನ್ನೊಂದಿಗೆ ಯಾರು ಇರಲಿಲ್ಲ, ಆದರೆ ಇಂದು ಜನರು ನನ್ನನ್ನು ಗುರುತಿಸಿ ನನ್ನನ್ನು ಬಿಜೆಪಿಯ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಜನಪ್ರತಿನಿಧಿಯಾಗಿ ನಾನು ಜನರಿಂದ ಪ್ರೀತಿ ಮತ್ತು ವಾತ್ಸಲ್ಯವನ್ನು ಗಳಿಸಿದ್ದೇನೆ, ನೀವೆಲ್ಲರೂ ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದೀರಿ ಹೀಗಾಗಿ ನಿಮ್ಮ ನಂಬಿಕೆ ನಿರೀಕ್ಷೆಗಳನ್ನು ನಾನು ನಿರಾಶೆಗೊಳಿಸುವುದಿಲ್ಲ. ಈ ಹಿಂದೆ ಹಿಂದೂ ಮತ್ತು ಮುಸ್ಲಿಮರು ಅನೋನ್ಯವಾಗಿದ್ದರು. ಆದರೆ ಓಟ್ ಬ್ಯಾಂಕ್ ಹಿಂದೂ - ಮುಸ್ಲಿ ಬಾಂಧವ್ಯಕ್ಕೆ ಹುಳಿಹಿಂಡಿತು. ಆ ಬಳಿಕ ಎಲ್ಲವೂ ಹಾಳಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಆ ಬಳಿಕ ಮಾತನಾಡಿದ ಕುಲಪತಿ ಯೆನಪೋಯಾ ವಿಶ್ವವಿದ್ಯಾಲಯ ವೈ. ಅಬ್ದುಲ್ಲಾ ಕುಂಜಿ ಮಾತನಾಡಿ, ”ನಳಿನ್ ಕುಮಾರ್ ಕಟೀಲ್ ಅವರ ಸಾಮರ್ಥ್ಯದಿಂದಾಗಿ, ಬಿಜೆಪಿ ಹೈಕಮಾಂಡ್ ನಳಿನ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸುವುದು ಮಾತ್ರವಲ್ಲದೆ, ಜನರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿದ್ದಾರೆ" ಎಂದರು.