ಮಂಗಳೂರು, ಸೆ.03(Daijiworld News/SS): ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇನ್ನೂ ಮೂರು ಕಾಲ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಜಿಲ್ಲೆಯಲ್ಲಿ, 115ರಿಂದ 200 ಮಿ.ಮೀ ವರೆಗೂ ಮಳೆ ಸುರಿಯುವುದಾಗಿ ನಿರೀಕ್ಷಿಸಲಾಗಿದೆ.
ದ. ಕನ್ನಡ ಜಿಲ್ಲೆಯ ಬೆಳ್ಳಾರೆ, ಕಡಬ ಭಾಗದಲ್ಲಿ ಗುಡುಗು ಸಹಿತ ಮಳೆಯಾದರೆ ಸುಬ್ರಹ್ಮಣ್ಯದಲ್ಲೂ ಉತ್ತಮ ಮಳೆಯಾಗಿದೆ. ಸುಳ್ಯದಲ್ಲಿ ಎರಡು ದಿನಗಳಿಂದ ಮಳೆ ಚುರುಕಾಗಿದ್ದು, ಇನ್ನೂ ಮುಂದುವರಿದಿದೆ. ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿಯಲ್ಲೂ ಆಗಾಗ ಸಾಮಾನ್ಯದಿಂದ ಉತ್ತಮ ಮಳೆ ಸುರಿದಿದೆ.
ಇತ್ತ ಕರಾವಳಿಯಲ್ಲಿ ಗಣೇಶೋತ್ಸವದ ಸಂಭ್ರಮ ಮನೆಮಾಡಿದೆ. ಆದರೆ ಸತತ ಸುರಿಯುತ್ತಿರುವ ಮಳೆಯಿಂದಾಗಿ ಗಣೇಶ ಹಬ್ಬದ ಸಂಭ್ರಮಕ್ಕೂ ಅಡ್ಡಿಯಾಗುತ್ತಿದೆ. ಹಬ್ಬದ ಆಚರಣೆಗೆ ಮಳೆರಾಯ ಅಡ್ಡಿಯಾಗಿದ್ದು, ಜನರ ಹುಮ್ಮಸ್ಸಿಗೆ ತಣ್ಣಿರೇರೆಚಿದೆ.
ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುವ ಸಾಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ, ಕಾಸರಗೋಡು ಒಳಗೊಂಡಂತೆ ಹತ್ತು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.