ಉಳ್ಳಾಲ, ಸೆ 02 (DaijiworldNews/SM): ಧರ್ಮಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುವಂತಹ ಸಂದೇಶ ಕಳುಹಿಸಿದ ಆರೋಪದ ಮೇರೆಗೆ ಉಳ್ಳಾಲ ನಗರಸಭೆಯ ಮಾಜಿ ಕೌನ್ಸಿಲರ್ ಬಂಧನವನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ಠಾಣೆ ಎದುರು ಹಮ್ಮಿಕೊಂಡ ಪ್ರತಿಭಟನೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಠಾಣೆಯ ಎದುರು ಜಮಾಯಿಸಿದ್ದ ಕಾರ್ಯಕರ್ತರು ಪೊಲೀಸರ ಕಟು ಎಚ್ಚರಿಕೆಯಿಂದಾಗಿ ಪ್ರತಿಭಟನೆಯಿಂದ ಹಿಂದೆಸರಿದಿದ್ದಾರೆ.
ಉಳ್ಳಾಲ ನಗರಸಭೆಯ ಮಾಜಿ ಕೌನ್ಸಿಲರ್ ಜೆಡಿಎಸ್ ಮುಖಂಡ ಝಾಕಿರ್ ಹುಸೈನ್ ಅವರನ್ನು ಭಾನುವಾರ ಉಳ್ಳಾಲ ಪೊಲೀಸರು ಬಂಧಿಸಿದ್ದರು. ಬ್ಯಾರಿ ಭಾಷೆಯಲ್ಲಿ ಪೊಲೀಸರಿಗೆ, ಎರಡು ಧರ್ಮಗಳ ನಡುವಿನ ವಿಚಾರವನ್ನು ಪ್ರಸ್ತಾಪಿಸಿ ಸಂಘರ್ಷಕ್ಕೆ ಎಡೆ ಮಾಡುವಂತಹ ಸಂದೇಶವನ್ನು ಕಳುಹಿಸಿದ್ದರು. ಇದು ಪೊಲೀಸ್ ಇಲಾಖೆಯ ಕೆಂಗಣ್ಣಿಗೆ ಗುರಿ ಮಾಡಿತ್ತು. ಈ ಕುರಿತು ಪೊಲೀಸ್ ಕಮೀಷನರ್ ಅವರ ಆದೇಶದಂತೆ ಝಾಕಿರ್ ಹುಸೈನ್ ಅವರನ್ನು ಬಂಧಿಸುವಂತೆ ಆದೇಶಿಸಿದ್ದರು. ಅದರಂತೆ ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಸಾಮಾಜಿಕವಾಗಿ ನಡೆಯುತ್ತಿರುವ ಶೋಷಣೆಯನ್ನು ಪ್ರತಿಭಟಿಸಿ ಝಾಕಿರ್ ಮಾತುಗಳನ್ನಾಡಿದ್ದರು. ಅದನ್ನೇ ಅಪರಾಧವೆಂಬಂತೆ ಬಿಂಬಿಸಿ ಸಾಮಾಜಿಕ ಮತ್ತು ಮಾನವ ಹಕ್ಕುಗಳ ಹೋರಾಟಗಾರರಾಗಿರುವ ಝಾಕಿರ್ ಹುಸೈನ್ ಉಳ್ಳಾಲ ಅವರನ್ನು ಬಂಧಿಸಿರುವ ಪೊಲೀಸರ ನಿಲುವು ಖಂಡಿಸಿ ಪಿಎಫ್ ಐ ಉಳ್ಳಾಲ ಠಾಣೆಯೆದುರು ಬೃಹತ್ ಪ್ರತಿಭಟನೆಗೆ ಕರೆ ನೀಡಿತ್ತು.
ಅದರಂತೆ ಸಂಜೆ 4ರ ವೇಳೆಗೆ ಬೃಹತ್ ಸಂಖ್ಯೆಯಲ್ಲಿ ಪಿಎಫ್ ಐ ಕಾರ್ಯಕರ್ತರು ಜಮಾಯಿಸ ತೊಡಗಿದರು. ಉಳ್ಳಾಲ, ಕೊಣಾಜೆ, ಮಂಗಳೂರು ದಕ್ಷಿಣ ಸಹಿತ ವಿವಿಧ ಠಾಣೆಯ ಪೊಲೀಸರು, ಕೆಎಸ್ ಆರ್ ಪಿ ಪಡೆ, ಸಿಆರ್ ಪಿಎಫ್ ಯೋಧರು ಸುಮಾರು 100ಕ್ಕೂ ಅಧಿಕ ಪೊಲೀಸರ ತಂಡ ಬಂದೋಬಸ್ತ್ ಏರ್ಪಡಿಸಿತ್ತು. ಪ್ರತಿಭಟನೆಗೆ ಕಾರ್ಯಕರ್ತರು ಮುಂದಾದಾಗ ನಾಯಕರನ್ನು ಕರೆಸಿದ ಎಸಿಪಿ ಕೋದಂಡರಾಮ, ಹಬ್ಬದ ದಿನವಾಗಿರುವುದರಿಂದ ಪ್ರತಿಭಟನೆ ನಡೆಸಲು ಯಾವುದೇ ರೀತಿಯ ಅವಕಾಶವಿಲ್ಲ. ನಿಮ್ಮ ನ್ಯಾಯಕ್ಕಾಗಿ ನೀವು ಪ್ರತಿಭಟನೆ ಮಾಡುತ್ತೀರಿ. ಆದರೆ ಸಮಯ ದುರುಪಯೋಗಪಡಿಸಿಕೊಂಡು ಕಿಡಿಗೇಡಿಗಳು ಕಲ್ಲು, ಬಾಟಲಿ ಎಸೆಯುತ್ತಾರೆ ಎಂದರು.
ಈ ವೇಳೆ ಅನಿವಾರ್ಯವಾಗಿ ಲಾಠಿ ಚಾರ್ಜ್ ನಡೆಸಬೇಕಾಗುತ್ತದೆ. ಜಿಲ್ಲೆಯಾದ್ಯಂತ ಹಬ್ಬದ ವಾತಾವರಣವಿದೆ. ಸ್ವಲ್ಪ ಗಲಾಟೆ ನಡೆದರೂ, ಹತ್ತಿಕ್ಕುವುದು ಬಹಳಷ್ಟು ಕಷ್ಟ. ಈ ನಿಟ್ಟಿನಲ್ಲಿ ಬೇರೆ ಯಾವ ದಿನದಲ್ಲಾದರೂ ಪ್ರತಿಭಟಿಸಿ, ಯಾವುದೇ ಧರ್ಮಗಳ ಹಬ್ಬದ ದಿನಗಳಂದು ಪ್ರತಿಭಟನೆಗೆ ಪೊಲೀಸ್ ಇಲಾಖೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಕಟುವಾಗಿ ಎಚ್ಚರಿಕೆ ನೀಡಿದರು.
ಇದನ್ನು ಒಪ್ಪಿಕೊಂಡ ಪಿಎಫ್ ಐ ಕಾರ್ಯಕರ್ತರು ಸ್ಥಳದಿಂದ ತೆರಳಿ, ಬೇರೆ ದಿನ ಪ್ರತಿಭಟನೆ ನಡೆಸುವುದಾಗಿ ತೀರ್ಮಾನ ಕೈಗೊಂಡಿದ್ದಾರೆ. ಸ್ಥಳದಲ್ಲಿ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಕಂಕನಾಡಿ ಠಾಣಾಧಿಕಾರಿ ಅಶೋಕ್, ಉಳ್ಳಾಲ ಠಾಣಾಧಿಕಾರಿ ರವೀಶ್ ನಾಯಕ್ ಬಂದೋಬಸ್ತ್ ನ ನೇತೃತ್ವ ವಹಿಸಿದ್ದರು.