ಮಂಗಳೂರು,ಸೆ 2 (Daijiworld News/RD): ವಿಘ್ನವಿನಾಶಕ, ಮೋದಕ ಪ್ರಿಯ ಗಣಪತಿಯ ಆರಾಧನೆ ನಾಡಿನೆಲ್ಲೆಡೆ ಸಂಭ್ರಮದಿಂದ ನಡೆಯುತ್ತಿದ್ದು, ಇನ್ನು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಬಂಟರ ಸಂಘದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಆಯೋಜಿಸಲ್ಪಡುವ ಗಣಪತಿಯ ಮೂರ್ತಿ ಪ್ರತಿಷ್ಠಾಪನೆ ಇಂದು ನಡೆಯಿತು. ನೂರಾರು ಮಂದಿ ಭಕ್ತರು ಭಕ್ತಿ ಭಾವದಿಂದ ಪೂಜೆ ಮಾಡಿ ದೇವರ ಕೃಪೆಗೆ ಭಾಜನರಾದರು.
ಜಿಲ್ಲೆಯ ವಿವಿಧ ಕಡೆಗಳಲ್ಲಿ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪನೆ ನಡೆಸಿ ಅದ್ದೂರಿಯಾಗಿ ಪೂಜೆ ನಡೆದರೆ ಶತಮಾನದ ಇತಿಹಾಸವಿರುವ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಸೌತಡ್ಕ ಬಯಲು ಗಣಪನಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆಗಳು ಇಂದು ಗಣೇಶ ಚತುರ್ಥಿ ಅಂಗವಾಗಿ ನಡೆಯಿತು. ಬಯಲಿನಲ್ಲಿ ಕಲ್ಲಿನ ವಿಗ್ರಹದಲ್ಲಿ ಪ್ರತಿಷ್ಠಾಪಿಸಿರುವ ಬಯಲು ಆಲಯದಲ್ಲಿ ಮುಂಜಾನೆಯಿಂದಲೇ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಬಯಲು ಗಣೇಶ ನಿಗೆ ಪೂಜೆ ಸಲ್ಲಿಸಿದರು. ಮಳೆಯ ನಡುವೆಯೂ ನಿರಂತರವಾಗಿ ಪೂಜೆ ನಡೆಯುತ್ತಲೆ ಇದ್ದಿದ್ದು ವಿಶೇಷ. ಇಲ್ಲಿಗೆ ಬರುವ ಭಕ್ತರು ಭಯ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆಯೂ ಇದೆ.
ಹಬ್ಬದ ಸಂಭ್ರಮ ಒಂದೆಡೆಯಾದರೆ, ಇನ್ನೊಂದೆಡೆ ತರಕಾರಿ ಬೆಲೆಯೂ ಗಗನಕ್ಕೇರಿದೆ. ಈ ಮೂಲಕ ಜನ ತರಕಾರಿ ಕೊಳ್ಳಲೂ ಪ್ರಯಾಸ ಪಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿ, ಹಣ್ಣುಹಂಪಲುಗಳ ಬೆಲೆ ಹೆಚ್ಚಾಗಿದ್ದು, ಕೆಲವು ದಿನಗಳಿಂದ ಏಲಕ್ಕಿ ಬಾಳೆಹಣ್ಣಿನ ಬೆಲೆ ಕಿಲೋಗೆ 100 ರೂಪಾಯಿ ಸ್ಥಿರವಾಗಿದ್ದರೆ, ಸೇಬಿನ ಬೆಲೆ ಕಿಲೋ 320ಕ್ಕೇರಿದೆ. ಪಚ್ಚಬಾಳೆ ಬೆಲೆ ಕಿಲೋಗೆ 42 ಇದ್ದರೆ, ನೇಂದ್ರ ಬಾಳೆಹಣ್ಣಿನ ಬೆಲೆ (ಕಿಲೋ 100) ರೂಪಾಯಿ ತಲುಪಿದೆ. ಕಪ್ಪು ದ್ರಾಕ್ಷಿ 130, ಕೆಂಪು ದ್ರಾಕ್ಷಿ 350, ಸೀತಾಫಲ 160, ಸಪೋಟಾ, ಸೀಬೆಕಾಯಿ 110, ಮೂಸಂಬಿ 85, ಕಿತ್ತಳೆ (ಆಮದು) 248, ಫೈನಾಪಲ್ 75, ದಾಳಿಂಬೆ ರೂಪಾಯಿ 160ಕ್ಕೆ ತಲುಪಿದೆ. ಟೊಮೆಟೋ ಬೆಲೆ 20ರೂಪಾಯಿ ಇದ್ದರೆ, ಉತ್ತಮ ಗುಣಮಟ್ಟದ ಈರುಳ್ಳಿ 37, ಆಲೂಗೆಡ್ಡೆ 32 ರೂಪಾಯಿ ಸ್ಥಿರವಾಗಿದೆ. ಬೀನ್ಸ್ ಬೆಲೆ 90 ರೂಪಾಯಿ, ಬದನೇಕಾಯಿ 55 , ಕ್ಯಾರೆಟ್ 85 ರೂಪಾಯಿ ಇದೆ. ಸೊಪ್ಪುಗಳ ಬೆಲೆ ಏರಿಕೆಯಾಗಿದೆ. 4 ರೂಪಾಯಿಗೆ ಸಿಗುತ್ತಿದ್ದ ಒಂದು ಕಟ್ಟು ಕೊತ್ತಂಬರಿ ಬೆಲೆ ಶುಕ್ರವಾರ 10 ರೂಪಾಯಿ ಆಗಿತ್ತು. ಕರಿಬೇವು 8, ಮೆಂಥ್ಯ ಸೊಪ್ಪು 12, ಪಾಲಕ್ ಸೊಪ್ಪು10 ರೂಪಾಯಿ ಇತ್ತು. ಈ ಎಲ್ಲಾ ಸೊಪ್ಪುಗಳ ಬೆಲೆ ನಾಲ್ಕೈದು ರೂಪಾಯಿ ಏರಿಕೆ ಕಂಡಿದೆ.