ಮಂಗಳೂರು,ಸೆ 1 (Daijiworld News/RD): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಉದ್ಘಾಟಿಸಿದರು.
ಜಿ.ಪಂ. ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ದೋಷ ಇರುವ ಬಗ್ಗೆ ಮತದಾರರಿಂದ ದೂರು ಬರುತ್ತಿವೆ. ಈ ಹಿನ್ನಲೆಯಲ್ಲಿ ಮತದಾರರ ಪಟ್ಟಿಯ ದೋಷಗಳನ್ನು ಸರಿಪಡಿಸಲು ಈ ಅವಧಿಯಲ್ಲಿ ಮತಗಟ್ಟೆ ಅಧಿಕಾರಿ ( ಬಿಎಲ್ಓ)ಗಳು ಮನೆಮನೆಗೆ ಭೇಟಿ ನೀಡಲಿದ್ದಾರೆ. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸ್ವೀಪ್ ಜಿಲ್ಲಾ ರಾಯಭಾರಿ ಕರ್ನಲ್ ಶರತ್ ಭಂಡಾರಿ ಮಾತನಾಡಿ, ಚುನಾವಣಾ ದಿನ ಮಾತ್ರ ಆಸಕ್ತಿ ತೋರುವ ಮತದಾರರು ಉಳಿದ ದಿನಗಳಲ್ಲಿ ಮತದಾರರ ಪಟ್ಟಿಯ ಪರಿಶೀಲನೆ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸಲ್ಲದು. ಅಭಿಯಾನದ ಸಂದರ್ಭದಲ್ಲಿ ಬಿಎಲ್ಓ ಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಮತದಾರರ ಪಟ್ಟಿಯನ್ನು ಶುದ್ದೀಕರಣಗೊಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾತನಾಡಿ, ಮತದಾರರಿಗೆ ಉತ್ತಮ ಸೇವೆ ನೀಡಲು ಈ ಕಾರ್ಯಕ್ರಮ ನಡೆಯುತ್ತಿದೆ. ಇಂದಿನಿಂದ ಅಕ್ಟೋಬರ್ 15 ರವರೆಗೆ ಈ ಕಾರ್ಯಕ್ರಮ ನಡೆಯುತ್ತಿದೆ. ಮತದಾರರು ತಮ್ಮ ಹೆಸರು ಸೇರಿಸಲು, ತಿದ್ದುಪಡಿ ಮಾಡಲು ಹಾಗೂ ತೆಗೆದು ಹಾಕಲು ಇದು ಉತ್ತಮ ಅವಕಾಶ ಎಂದು ಅವರು ಹೇಳಿದರು. ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ್ ಸ್ವಾಗತಿಸಿದರು. ಸ್ವೀಪ್ ನೋಡಲ್ ಅಧಿಕಾರಿ ಸುಧಾಕರ್ ವಂದಿಸಿದರು. ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಮತದಾರರ ಪರಿಶೀಲನಾ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.