ವರದಿ - ರಾಘವೇಂದ್ರ ಕುಂದಾಪುರ
ಭಟ್ಕಳ, ಆ.31(Daijiworld News/SS): ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲೆಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆಮಾಡಲಿದೆ. ಒಂದೆಡೆ ಹಬ್ಬದ ಆಚರಣೆಯ ಗಡಿಬಿಡಿ ಮನೆ ಮನೆಯಲ್ಲಿದ್ದರೆ, ಇನ್ನೊಂದೆಡೆ ಗಣಪತಿ ತಯಾರಕರು ಸುಂದರ ಮೂರ್ತಿಗಳನ್ನು ತಯಾರಿಸಿ ಅದನ್ನು ಪ್ರತಿಷ್ಠಾಪಿಸಲು ಪೂಜಿಸುವ ಭಕ್ತರಿಗೆ ನೀಡಬೇಕಾಗಿದೆ. ಈ ಮೃಣ್ಮಯ ಗಣಪನ ಮೂರ್ತಿಗಳನ್ನು ರಚಿಸುವ ಮೂಲಕ ಭಟ್ಕಳದ ಗುಡಿಗಾರಗಲ್ಲಿಯ ಸದಾಶಿವ ಗುಡಿಗಾರ ಭಾರೀ ಮನೆಮಾತಾದವರು.
ಹೌದು ಮೂರು ತಲೆಮಾರಿನ ಜನರು ಒಟ್ಟಿಗೆ ಕುಳಿತು ಗಣಪಣ ಮೂರ್ತಿಗಳನ್ನು ತಯಾರಿಸುತ್ತಿರುವ ಸುಂದರ ಚಿತ್ರಣವನ್ನು ಭಟ್ಕಳದ ಗುಡಿಗಾರಗಲ್ಲಿಯ ಸದಾಶಿವ ಗುಡಿಗಾರ ಮನೆಯಲ್ಲಿ ನೋಡಬಹುದಾಗಿದೆ. ಈ ಕುಟುಂಬ ಈಗಾಗಲೇ ಅದೆಷ್ಟೋ ಸುಂದರ ಕಲಾತ್ಮಕ ಗಣಪತಿ ಮೂರ್ತಿಗಳ ತಯಾರಿಕೆಯನ್ನು ಮಾಡಿದ್ದು, ಎಣಿಸಲು ಸಾಧ್ಯವಿಲ್ಲವಾಗಿದೆ. ಹೊನ್ನಾವರದ ಕರ್ಕಿಯಲ್ಲಿ ತಯಾರಿಸಲ್ಪಡುವ ಹೆಚ್ಚು ಗಣಪತಿಯ ಮೂರ್ತಿಯ ಬಳಿಕ, ಭಟ್ಕಳದ ಗುಡಿಗಾರರ ಕುಟುಂಬ ಅತಿ ಹೆಚ್ಚಿನ ಗಣಪತಿ ತಯಾರಿಕೆಯಲ್ಲಿ ಪ್ರವೀಣರು.
90ನೇ ವರ್ಷ ವಯಸ್ಸಿನ ಸದಾಶಿವ ಗುಡಿಗಾರ, ಅವರ ಪುತ್ರ ಅರುಣ ಗುಡಿಗಾರ, ಅವರ ಮಗ ಅಮೀತ ಗುಡಿಗಾರ ಜೊತೆ ಸೇರಿಕೊಂಡು ಗಣಪತಿಯ ಮೂರ್ತಿಯನ್ನು ಬಹಳ ಸುಂದರವಾಗಿ ತಯಾರಿಸುತ್ತಾರೆ. ಆಯಿಲ್ ಪೈಂಟ್'ನಿಂದ ಮಾಡಿದ ಗಣಪತಿ ಸೇರಿದಂತೆ, ಪರಿಸರ ಸ್ನೇಹಿ ಗಣಪತಿಯನ್ನು ಇವರಿಲ್ಲಿ ತಯಾರಿಸುತ್ತಾರೆ. ಈ ಗುಡಿಗಾರರ ಗಣಪತಿ ತಯಾರಿಕೆಯಲ್ಲಿ ವಿಶೇಷವೆಂದರೆ, ಗಣಪತಿಯ ಮೂರ್ತಿಯನ್ನು ದಿಟ್ಟಸಿ ನೋಡುವಾಗ ದೇವರೇ ಕಣ್ಣ ಮುಂದೆ ಬಂದು ನಿಂತಂತೆ ಭಾಸವಾಗುತ್ತದೆ.
ವಿಶೇಷ ಶ್ರದ್ಧೆ, ಭಕ್ತಿ ಕಲೆ ಎನ್ನುವುದು ಎಲ್ಲರಿಗೂ ಪ್ರಾಪ್ತವಾಗುವುದಲ್ಲ. ಅದರಲ್ಲೂ ಗಣಪತಿ ತಯಾರಿಕಾ ದಿನಗಳಲ್ಲಿ ಕೆಲವು ವಿಶೇಷ ಶ್ರದ್ಧೆ, ಭಕ್ತಿಯಿದ್ದು ಕೆಲವೊಂದು ಕಟ್ಟು ಪಾಡುಗಳಿವೆ. ದೇವರ ನಾಮಸ್ಮರಣೆಯೊಂದಿಗೆ ಗಣಪತಿ ತಯಾರಿಕೆಗೆ ಈ ಗುಡಿಗಾರರ ಕುಟುಂಬ ಕುಳಿತುಕೊಳ್ಳುತ್ತಾರೆ. ಇದು ಮಡಿವಂತಿಕೆಯ ಕಾರ್ಯವಾಗಿದ್ದು, ಕುಟುಂಬದ ಎಲ್ಲರೂ ಇದನ್ನು ಇಂದಿಗೂ ಪಾಲನೆ ಮಾಡುತ್ತಿರುವುದು ವಿಶೇಷ.
ಗಣಪತಿ ಮೂರ್ತಿಯ ನಿರ್ಮಾಣಕ್ಕೆ ಮಣ್ಣು ಅತ್ಯವಶ್ಯಕ. ಹಿಂದೆಲ್ಲ ಅಗತ್ಯ ಮಣ್ಣಿನ ಪೂರೈಕೆಯಾಗುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ರ್ತಿಗೆ ಅಗತ್ಯವಾದ ಜೇಡಿ ಮಣ್ಣಿನ ಲಭ್ಯತೆ ಕುಂಠಿತವಾಗಿದೆ. ಸಿಕ್ಕಿದ ಮಣ್ಣು ಸಹ ಅಷ್ಟು ಉತ್ತಮವಾಗಿರುವುದಿಲ್ಲ. ಆದರೆ ಗುಡಿಗಾರರ ಕುಟುಂಬ ಗಣಪತಿ ನಿರ್ಮಾಣಕ್ಕೆಂದೇ ಸಿದ್ದಾಪುರದಿಂದ ಮಣ್ಣನ್ನು ತಂದು ಕೆಲಸಗಾರರಿಂದ ಮಣ್ಣನ್ನು ಹದಗೊಳಿಸಿ ಮೂರು ತಿಂಗಳ ಸತತ ಪರಿಶ್ರಮದಲ್ಲಿ ಸಾಕಷ್ಟು ಸಮಸ್ಯೆ, ತೊಂದರೆಯನ್ನು ಎದುರಿಸಿ ಗಣಪತಿಯಲ್ಲಿಯೇ ಪ್ರಾರ್ಥನೆ ಮಾಡಿ ಕೆಲಸ ನಡೆಸುತ್ತಾ ಬಂದಿದ್ದಾರೆ.
250ಕ್ಕೂ ಅಧಿಕ ಗಣಪತಿ ಮೂರ್ತಿ ತಯಾರಿಕೆ:
ತಾಲೂಕಿನಲ್ಲಿ ಏಕೈಕ ಗುಡಿಗಾರ ಮನೆ ಇದಾಗಿದ್ದು, ಈ ತಾಲೂಕಿನ ಎಲ್ಲಾ ಗ್ರಾಮ, ಹಳ್ಳಿ, ನಗರ, ಸಾರ್ವಜನಿಕ ಸಮಿತಿಗಳು ಸೇರಿದಂತೆ ಅಕ್ಕ ಪಕ್ಕದ ತಾಲೂಕಿಗೂ ಇವರು ತಯಾರಿಸಿದ ಗಣಪತಿಯನ್ನೇ ಬಳಸಲಾಗುತ್ತದೆ. 5 ಇಂಚು ಗಣಪತಿಯಿಂದ ಹಿಡಿದು 5 ಅಡಿಯವರೆಗಿನ ಗಣಪತಿಯ ಮೂರ್ತಿಯನ್ನು ಗುಡಿಗಾರರು ತಯಾರಿಸುತ್ತಾರೆ.
ಗಣಪ ಮೂರ್ತಿ ರಚನೆ ಹವ್ಯಾಸವಾಗಿದ್ದು, ಇದರೊಂದಿಗೆ ಸೇವಾ ಉದ್ದೇಶವಿದೆ. ಪರಿಸರ ಸ್ನೇಹಿ ಗಣಪನನ್ನು ಹಲವು ವರ್ಷಗಳಿಂದ ರಚಿಸುತ್ತಿದ್ದೇನೆ. ಈ ವರ್ಷ ರಾಸಾಯನಿಕ ರಹಿತವಾದ ಗರಿಕೆ ಪೈಂಟ್(ಬಣ್ಣ)ವನ್ನು ಬಳಸುವ ಮೂಲಕ ಪರಿಸರಕ್ಕೆ ಪೂರಕ ಕ್ರಮ ವಹಿಸಿದ್ದೇನೆ. ಹುಟ್ಟೂರಲ್ಲಿ ನನಗೆ ಈ ಅವಕಾಶ ದೊರಕುತ್ತಿರುವುದು ಸಂತಸ, ಭಗವಂತನ ಆಶೀರ್ವಾದವೆನ್ನುತ್ತಾರೆ ಸದಾಶಿವ ಗುಡಿಗಾರ.