ಮಂಗಳೂರು, ಆ.31(Daijiworld News/SS): 2019-20 ಸಾಲಿನ ದಸರಾ ರಜೆಯನ್ನು ಅಕ್ಟೋಬರ್ 6ರಿಂದ 20ರವರೆಗೆ ತನಕ ನೀಡಲು ಶಾಲಾ ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ, ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಸೆಪ್ಟೆಂಬರ್ 28 ರಿಂದಲೇ ಮಕ್ಕಳಿಗೆ ದಸರಾ ರಜೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 28 ರಿಂದಲೇ ನವರಾತ್ರಿ ಹಬ್ಬ ಪ್ರಾರಂಭವಾಗಲಿದ್ದು, ನವದುರ್ಗೆಯರ ಪ್ರತಿಷ್ಟಾಪನೆ ಸಹಿತ ವಿವಿಧ ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಆಚರಣೆಗಳು ಆರಂಭವಾಗಲಿವೆ. ಅಕ್ಟೋಬರ್ 6ರಿಂದ ರಜೆ ನೀಡಿದ್ದಲ್ಲಿ ದಸರಾ ಆಚರಣೆಯಲ್ಲಿ ಭಾಗವಹಿಸಲು ಮಕ್ಕಳಿಗೆ ಮತ್ತು ಪೋಷಕರಿಗೆ ಕಷ್ಟವಾಗಲಿದೆ. ಈ ಹಿನ್ನಲೆಯಲ್ಲಿ, ಸೆಪ್ಟೆಂಬರ್ 28 ರಿಂದಲೇ ರಜೆ ನೀಡಲು ಆರಂಭಿಸಿದ್ದಲ್ಲಿ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಅದೇ ರೀತಿ ರಾಜ್ಯ ಸರಕಾರದಿಂದ ದಸರಾ ಹಬ್ಬಕ್ಕಾಗಿ ಕೊಡುವ ರಜೆಯನ್ನು ಕಡಿತ ಮಾಡುವುದಾಗಲಿ ಅಥವಾ ಆಡಳಿತ ಮಂಡಳಿ ರಜೆಯನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವುದು ಸರಿಯಲ್ಲ. ದಸರಾ ಹಬ್ಬಕ್ಕಾಗಿ ನೀಡುವ ರಜೆಯಲ್ಲಿ ಯಾವುದೇ ವ್ಯತ್ಯಾಸವಾಗಬಾರದು ಎಂದು ಸೂಚಿಸಿದ್ದಾರೆ.
ಈ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ಬಗ್ಗೆ ಜಿಲ್ಲಾಧಿಕಾರಿಯವರು ಗಮನ ಹರಿಸಿ ದಸರಾ ರಜೆಯನ್ನು ಯಾವುದೇ ಕಾರಣಕ್ಕೂ ಕಡಿತ ಮಾಡಬಾರದು ಎಂದು ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯವರಿಗೆ ಸೂಚಿಸಬೇಕು ಎಂದು ಕೂಡ ಶಾಸಕ ಕಾಮತ್ ಹೇಳಿದ್ದಾರೆ.