ಮಂಗಳೂರು,ಆ 31 (Daijiworld News/RD): ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಮುಂಜಾನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ನೇರವಾಗಿ ಪಚ್ಚನಾಡಿ ತ್ಯಾಜ್ಯ ಹರಿದು ಸಂಕಷ್ಟಕ್ಕೀಡಾದ ಮಂದಾರ ಪ್ರದೇಶದ ಸಂತ್ರಸ್ತ ಜನತೆಯನ್ನು ಭೇಟಿ ಮಾಡಿ ಅಲ್ಲಿನ ಸಮಸ್ಯೆಯನ್ನು ಆಲಿಸಿದರು.
ಈ ಸಂದರ್ಭ ಸ್ಥಳೀಯರಾದ ರಾಜೇಶ್ ಭಟ್ ಅವರು ಇಲ್ಲಿನ ಸಂಕಷ್ಟಗಳನ್ನು ಎಳೆ ಎಳೆಯಾಗಿ ಸಿದ್ಧರಾಮಯ್ಯನವರ ಮುಂದಿಟ್ಟರು. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಅವರು ನಗರ ಪಾಲಿಕೆಯಿಂದ ಸಂತ್ರಸ್ತರಿಗೆ ನೆರವಾಗಲು ಕೈಗೊಂಡ ಕೆಲಸಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಮಾಜಿ ಸಚಿವ ಯು ಟಿ ಖಾದರ್ ಅವರು ಸಿದ್ಧರಾಮಯ್ಯನವರಿಗೆ ವಿವರಿಸಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ಧರಾಮಯ್ಯ, ತ್ಯಾಜ್ಯ ಹರಿದ ಕಾರಣ ಇಲ್ಲಿನ ಜನತೆ ಸಂಕಷ್ಟಕ್ಕೊಳಗಾಗಿದ್ದು, ಕೂಡಲೇ ಇದನ್ನು ಸ್ವಚ್ಛ ಮಾಡುವ ಕೆಲಸ ಮಾಡಬೇಕಾಗಿದೆ. ಜೊತೆಗೆ ನಿರಾಶ್ರಿತರಾದವರಿಗೆ ಒಂದು ಉತ್ತಮ ಮೌಲ್ಯ ಕೊಟ್ಟು ಅವರಿಗೆ ಬದುಕಲು ವ್ಯವಸ್ಥೆಯಾಗಬೇಕು. ಕೃಷಿ ಹಾನಿಗೆ ಸರಕಾರ ಸೂಕ್ತ ಪರಿಹಾರವನ್ನು ಕೂಡಲೇ ನೀಡಬೇಕು ಎಂದರು. ಇನ್ನು ಸಿದ್ಧರಾಮಯ್ಯ ಆಗಮನ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಸಂಚಲವನ್ನುಂಟು ಮಾಡಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಯು.ಟಿ,ಖಾದರ್, ಮಾಜಿ ಶಾಸಕ ಮೊಯಿದ್ದಿನ ಭಾವ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಮೇಯರ್ ಭಾಸ್ಕರ್ ಮೊಯಿಲಿ ಸೇರಿದಂತೆ ಜಿಲ್ಲೆಯ ಹಲವು ಕಾಂಗ್ರೆಸ್ ಕಾರ್ಯಕರ್ತರು ಜೊತೆಯಲ್ಲಿ ಇದ್ದರು.