ಭಟ್ಕಳ , ಆ 31 (Daijiworld News/MSP): ಪ್ರೇಮಿ ಜತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆದು ಗುಣಮುಖಳಾಗಿ ಮನೆಗೆ ಮರಳಿದ್ದ ಕಾಯ್ಕಿಣಿ ಗ್ರಾಮದ ಬಿದ್ರಮನೆ ನಿವಾಶಿ ಸಂಗೀತಾ ಮಾದೇವ ನಾಯ್ಕ(24) ಅವರು ಶುಕ್ರವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂದ್ದಾರೆ. ಈ ಮೂಲಕ ಪ್ರೇಮಿಗಳಿಬ್ಬರು ತಮ್ಮ ಬದುಕಿಗೆ ದುರಂತ ಅಂತ್ಯ ಹಾಡಿದ್ದಾರೆ.
ಗಗನ್ ಈಶ್ವರ ನಾಯ್ಕ(27) ಮತ್ತು ಸಂಗೀತಾ ಮಾದೇವ ನಾಯ್ಕ(24) ಪ್ರಸ್ಪರ ಪ್ರೀತಿಸುತ್ತಿದ್ದು, ಇವರಿಬ್ಬರು ತಾಲೂಕಿನ ಮುರುಡೇಶ್ವರ ವ್ಯಾಪ್ತಿಯ ಮಂಕಿ ಅನಂತವಾಡಿ ಸೂಳೆಬೀಳು ಬುಧವಾರ ಅರಣ್ಯ ಪ್ರದೇಶದಲ್ಲಿ ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಪೈಕಿ ಗಗನ್ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಸಾವನ್ನಪ್ಪಿದ್ದ ಆದರೆ, ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಪಡೆದು ಮರಳಿದ್ದ ಸಂಗೀತಾ ಶವ ಶುಕ್ರವಾರ ಬೆಳಗ್ಗೆ ಬಾವಿಯಲ್ಲಿ ಕಂಡುಬಂದಿದೆ. ಪ್ರೇಮಿಗಳಿಬ್ಬರೂ ಭಟ್ಕಳ ಸರಕಾರಿ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾಗಿದ್ದರು. ಗಗನ್ ಬಿ.ಎ ಹಾಗೂ ಯುವತಿ ಬಿಕಾಮ್ವರೆಗೆ ಓದಿಕೊಂಡಿದ್ದಾಳೆ. ಯುವಕ ಗಗನ್ ಕೆಲ ತಿಂಗಳ ಹಿಂದೆಯಷ್ಟೇ ಶಿವಮೊಗ್ಗ ತರಿಕೇರಿಯಲ್ಲಿ ಕನ್ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲ ಕಾಲ ಕೆಲಸ ಮಾಡಿಕೊಂಡಿದ್ದ. ಇನ್ನು ಒಂದೆರಡು ತಿಂಗಳಲ್ಲಿ ಮತ್ತೆ ಕೆಲಸಕ್ಕೆ ತೆರಳುವುದಾಗಿ ಗೆಳೆಯರ ಬಳಿ ಹೇಳಿಕೊಂಡಿದ್ದ ಆದರೆ, ಬುಧವಾರ ಮಧ್ಯಾಹ್ನದ ಹೊತ್ತಿಗೆ ಅನಂತವಾಡಿ ಕಾಡನ್ನು ಸೇರಿಕೊಂಡಿರುವ ಇಬ್ಬರೂ 1 ರಿಂದ 1.30 ಗಂಟೆಯ ಅವಧಿಯಲ್ಲಿ ವಿಷ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ. ಗಗನ್ ತನ್ನ ಗೆಳೆಯೋರ್ವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದ. ಕೂಡಲೇ ಗಗನ್ನ ಗೆಳೆಯರು ಹಾಗೂ ಸಹೋದರ ಎಲ್ಲರೂ ಸೇರಿಕೊಂಡು ಅನಂತವಾಡಿಯತ್ತ ಧಾವಿಸಿ ಬಂದಿದ್ದಾರೆ. ಸರಿಸುಮಾರು 2 ಗಂಟೆ ಅವಧಿಯವರೆಗೆ ಪ್ರೇಮಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇಬ್ಬರೂ ಪತ್ತೆಯಾಗುವಷ್ಟರಲ್ಲಿ ಗಗನ್ ತೀವ್ರ ಅಸ್ವಸ್ಥಗೊಂಡಿರುವುದು ತಿಳಿದು ಬಂದಿದೆ.
ಈ ಕುರಿತು ಮೃತ ಸಂಗೀತಾ ಅವರ ತಂದೆ ಮಾದೇವ ನಾಯ್ಕ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.