ಮಂಗಳೂರು, ಆ 31 (Daijiworld News/MSP): ಕರಾವಳಿಯ ಕ್ರೈಸ್ತ ಸಮುದಾಯ ಮೊಂತಿ ಫೆಸ್ತ್ ಗೆ ಸಜ್ಜಾಗುತ್ತಿದ್ದಾರೆ.ಆ.30 ರಂದು ಆರಂಭಗೊಂಡಿರುವ ಒಂಭತ್ತು ದಿನಗಳ ವಿಶೇಷ ಪ್ರಾರ್ಥನೆಯ ನಂತರ ಬರುತ್ತಿರುವ ಹೊಸತೆನೆಯ ಹಬ್ಬಕ್ಕಾಗಿ ಕ್ರೈಸ್ತ ಬಾಂಧವರ ಮನೆ-ಮನಗಳಲ್ಲಿ ಭರ್ಜರಿ ತಯಾರಿ ಸಾಗಿದೆ.
ಸೆಪ್ಟೆಂಬರ್ 8 ರಂದು ಯೇಸು ಕ್ರಿಸ್ತರ ತಾಯಿ ಮಾತೆ ಮರಿಯಮ್ಮನ (ಮೇರಿ ಮಾತೆ) ಜನ್ಮದಿನ. ಇದನ್ನೇ ಕೊಂಕಣಿ ಭಾಷೆಯಲ್ಲಿ ‘ಮೊಂತಿ ಫೆಸ್ತ್’ ಎಂದು ಕರೆಯಲಾಗುತ್ತದೆ. ಜಗತ್ತಿನೆಲ್ಲೆಡೆ ಮಾತೆ ಮೇರಿ ಜನ್ಮ ದಿನವನ್ನು ಕ್ರೈಸ್ತ ಧಾರ್ಮಿಕ ಕಟ್ಟುಪಾಡುಗಳ ಕಟ್ಟಳೆಯೊಂದಿಗೆ ಆಚರಿಸಿದರೆ, ಕರಾವಳಿಯ ಕ್ರೈಸ್ತರು ಮಾತ್ರ ಇದನ್ನು ಪ್ರಕೃತಿ ಆರಾಧನೆಯ ತೆನೆಹಬ್ಬವಾಗಿ ಆಚರಿಸುತ್ತಾರೆ.
ಒಂಭತ್ತು ದಿನಗಳ ನೊವೇನಾ ವಿಶೇಷ ಪ್ರಾರ್ಥನೆಗಾಗಿ ವಿಶೇಷವಾಗಿ ಚಿಕ್ಕ ಚಿಕ್ಕ ಮಕ್ಕಳು ಪ್ರತಿ ದಿನ ಚರ್ಚೆಗೆ ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ ಸಮರ್ಪಿಸಿ ಗೀತೆಗಳ ಮೂಲಕ ಪ್ರಾಥಿಸುತ್ತಾರೆ. ಸೆಪ್ಟೆಂಬರ್ 8 ರಂದು ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಮತ್ತು ಬಳಿಕ ಮನೆಗಳಲ್ಲಿ ಆಚರಿಸಲಾಗುತ್ತಿದೆ. ಕುಟುಂಬ ಸದಸ್ಯರೆಲ್ಲ ಸೇರಿಕೊಂಡು ರುಚಿ ರುಚಿಯಾದ ಖಾದ್ಯಗಳನ್ನು ಸವಿಯುವುದರ ಜತೆಗೆ ಕೌಟುಂಬಿಕ ಬಾಂಧವ್ಯ ಬೆಸೆಯುವ ಹಬ್ಬದಲ್ಲಿ ಪ್ರಕೃತಿ ಆರಾಧನೆಯನ್ನು ಮಾಡಲಾಗುತ್ತದೆ.
ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಿಶಿಷ್ಟ ತೆನೆಹಬ್ಬ ನಡೆಯುತ್ತಿದ್ದು, ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ 48 ಚರ್ಚ್ಗಳ ವ್ಯಾಪ್ತಿಗಳಲ್ಲಿ ಹಬ್ಬಕ್ಕಾಗಿ ಸಿದ್ಧತೆ ನಡೆಯುತ್ತಿದೆ.