ಮಂಗಳೂರು, ಆ 30 (DaijiworldNews/SM): ಉದ್ಯಮಿ ವಿಜಯೇಂದ್ರ ಭಟ್ ಮೇಲೆ ಶೂಟೌಟ್ ಪ್ರಕರಣ ಸೇರಿದಂತೆ ಏಳು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳ ಬಂಧಿಸುವಲ್ಲಿ ಯಶಸ್ವಿಯಾಗಿದೆ. ನಿಡ್ಡೆಲ್ ಮರೋಳಿ ನಿವಾಸಿ ದೀಕ್ಷಿತ್ ಪೂಜಾರಿ(31) ಬಂಧಿತ ಆರೋಪಿ.
ಭೂಗತ ಲೋಕದ ಪಾತಕಿ ವಿಕ್ಕಿ ಶೆಟ್ಟಿ ಸೂಚನೆಯಂತೆ ಬಳ್ಳಾಲ್ಬಾಗ್ನಲ್ಲಿ ಸುಧೀಂದ್ರ ಸೂಪರ್ ಮಾರ್ಕೆಟ್ ಮತ್ತು ಸಾಯ್ಬಿನ್ ಕಾಂಪ್ಲೆಕ್ಸ್ ಮಾಲಕ, ಉದ್ಯಮಿ ವಿಜಯೇಂದ್ರ ಭಟ್ ಅವರ ಕಾರಿಗೆ ಪಿಸ್ತೂಲಿನಿಂದ ಗುಂಡು ಹೊಡೆದ ಪ್ರಕರಣದಲ್ಲಿ ಆರೋಪಿ ತಲೆ ಮರೆಸಿಕೊಂಡಿದ್ದ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರ ಮತ್ತು ಉಡುಪಿ ಸೇರಿದಂತೆ ಏಳು ಪ್ರಕರಣಗಳಲ್ಲಿ ಆರೋಪಿ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಅಲ್ಲದೆ, ಬರ್ಕೆ, ಪಾಂಡೇಶ್ವರ, ಮಂಗಳೂರು ಉತ್ತರ, ಮಂಗಳೂರು ಪೂರ್ವ, ಸುರತ್ಕಲ್, ಉರ್ವ, ಉಡುಪಿ ಠಾಣೆಯಲ್ಲಿ ದಾಖಲಾದ ಶೂಟೌಟ್, ಕೊಲೆ, ಹಲ್ಲೆ ಹಾಗೂ ವಿವಿಧ ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿ ಬಳಿಕ ತಲೆಮರೆಸಿಕೊಂಡಿದ್ದ. ಅಲ್ಲದೆ, ಈತನ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.
ಇದೀಗ ಆರೋಪಿಯನ್ನು ಬಂಧಿಸಿ ಉಳ್ಳಾಲ ಠಾಣೆಗೆ ಹಸ್ತಾಂತರಿಸಲಾಗಿದೆ.