ಮಂಗಳೂರು, ಆ 30 (DaijiworldNews/SM): ರಾಜಕೀಯ ಪ್ರೇರಿತವಾಗಿ ರಾಜಕೀಯ ನಾಯಕರನ್ನು ಬಂಧಿಸುವ ಕೆಲಸವನ್ನು ಕೇಂದ್ರದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸರಕಾರ ಮಾಡುತ್ತಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಎಂದೆಂದಿಗೂ ಡಿ.ಕೆ. ಶಿವಕುಮಾರ್ ಜೊತೆಗೆ ಇರುತ್ತದೆ. ಇಡಿ, ಆದಾಯ ಇಲಾಖೆ ಅಧಿಕಾರಿಗಳು ಈ ರೀತಿಯಾಗಿ ನಮ್ಮ ನಾಯಕನ ಬಲವನ್ನು ಕುಗ್ಗಿಸುವ ಯತ್ನವನ್ನು ಮಾಡುವುದು ಸರಿಯಲ್ಲ. ಅವರು ಕಾನೂನಿನ ವ್ಯಾಜ್ಯದಲ್ಲಿ ವಿಜೇತರಾಗುತ್ತಾರೆ ಎಂದು ಖಾದರ್ ಹೇಳಿದರು.
ಇನ್ನು ಕೇಂದ್ರ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಕೂಡ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆ. ಇಡಿ ಇಲಾಖೆ ಕೇಂದ್ರ ಸರಕಾರದ ಕೈಗೊಂಬೆಯಾಗಿ ವರ್ತಿಸಿ ಮಾಜಿ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಡಿ ಕೆ ಶಿವಕುಮಾರ್ ಅವರಿಗೆ ಅನಗತ್ಯ ಕಿರುಕುಳ ನೀಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಇಡಿ ಇಲಾಖೆ ಹಾಗೂ ಆದಾಯ ತೆರಿಗೆ ಇಲಾಖೆಯ ವಿರುದ್ಧ ಮತ್ತು ದ್ವೇಷದ ರಾಜಕೀಯ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಯುವ ಕಾರ್ಯಕರ್ತರು ಮಿಥುನ್ ರೈ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು ರಾಜಕೀಯ ಪ್ರಭಾವ ಬಳಸಿ ಹಿಂಸೆ ನೀಡಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕರನ್ನು ಈ ರೀತಿಯಾಗಿ ಹಿಂಸಿಸುವ ಕೆಲಸ ನಡೆದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆಗಮಿಸಿದ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.