ಕುಂದಾಪುರ,ಆ 30 (Daijiworld News/RD): ದಲಿತ ಸಮುದಾಯದ ಮದುವೆ ಕಾರ್ಯಕ್ರಮವೊಂದಕ್ಕೆ ಆಗಮಿಸಿ ಪುರೋಹಿತಕ್ಕೆ ನಿರಾಕರಿಸಿದ ಘಟನೆಗೆ ಸಂಬಂಧಿಸಿ ದಲಿತ ದೌರ್ಜನ್ಯ ಮಾಡಿದ ಆರೋಪಕ್ಕೊಳಗಾದ ವ್ಯಕ್ತಿ ದೋಷಮುಕ್ತರಾಗಿದ್ದಾರೆ.
ಕುಂದಾಪುರ ತಾಲೂಕಿನ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಪರಿಶಿಷ್ಟ ವರ್ಗದವರ ಮದುವೆ ಮಾಡಲು ಪೌರೋಹಿತ್ಯಕ್ಕಾಗಿ ಗುಜ್ಜಾಡಿ ಗ್ರಾಮದ ಪುರೋಹಿತ ಕೃಷ್ಣ ಮೂರ್ತಿ ಭಟ್ಟ ಯಾನೆ ಬಾಬಣ್ಣ ಭಟ್ಟ ಎಂಬುವರು ಆಗಮಿಸಿದ್ದರು. 2013 ರ ಜೂನ್ 5 ರಂದು ಮದುವೆ ನಡೆದಿದ್ದು, ಸಾವಿರಕ್ಕೂ ಮಿಕ್ಕಿ ಅತಿಥಿಗಳು ಬಂದಿದ್ದಾಗ ಪುರೋಹಿತರು ರಾದ್ಧಾಂತ ಮಾಡಿದ್ದರು. ಇದರಿಂದ ಅವಮಾನಿತಗೊಂಡ ವಧುವಿನ ಅಣ್ಣ ಗಂಗೊಳ್ಳಿ ಠಾಣೆಗೆ ದೂರು ನೀಡಿದಾಗ ಪೋಲಿಸರು ಭಟ್ಟರನ್ನು ಬಂಧಿಸಿದ್ದರು.
ಕುಂದಾಪುರದ ಅಂದಿನ ಡಿವೈಎಸ್ಪಿ ಯಶೋದಾ ಒಂಟಿಗೋಡಿ ಆರೋಪಿ ವಿರುದ್ದ ಚಾರ್ಜ್ಶೀಟ್ ಸಲ್ಲಿಸಿದ್ದರು. ಆದರೆ ಪುರೋಹಿತರ ಪರವಾಗಿ ರವಿಕಿರಣ್ ಮುರ್ಡೇಶ್ವರ ಅವರು ತನ್ನ ಆರೋಪಿ ಕೃಷ್ಣಮೂರ್ತಿ ಭಟ್ಟರಿಗೆ ಪರಿಶಿಷ್ಟ ವರ್ಗದವರ ಮದುವೆ ಮಾಡಿದ ಅನುಭವ ಇಲ್ಲದ ಕಾರಣ ವಿವಾಹದ ಪುರೋಹಿತ್ಯ ಮಾಡಿಲ್ಲವೆಂದು ವಾದಿಸಿದ್ದರು. ವಾದ ಆಲಿಸಿದ ಉಡುಪಿಯ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿಯವರು ಆರೋಪಿ ಬಾಬಣ್ಣ ಭಟ್ಟರನ್ನು ದೋಷಮುಕ್ತಿಗೊಳಿಸಿ ತೀರ್ಪು ನೀಡಿದ್ದಾರೆ.