ಕುಂದಾಪುರ, ಆ.30(Daijiworld News/SS): ಕಳೆದ ಹಲವು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ನಿಧನರಾಗಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂಲತಃ ಹೊನ್ನಾವರದ ಚಂದ್ರನಾಣಿ ನಿವಾಸಿ ಜೆಟ್ಟಿ ಗೌಡ ಎಂಬವರ ಪುತ್ರಿ ಶಾರದಾ ಜೆ ಗೌಡ(28) ಸಾವಿಗೀಡಾದ ಮಹಿಳಾ ಕಾನ್ಸ್ಟೇಬಲ್.
ಶಾರದಾ ಜೆ ಗೌಡ 2011ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸೇವೆಗೆ ಸೇರಿದ್ದರು. 2017ರಿಂದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಕಳೆದ ಎಂಟು ತಿಂಗಳಿನಿಂದ ಅನಾರೋಗ್ಯ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಊರಿಗೆ ತೆರಳಿದ್ದರು. ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಡಿಸ್ಚಾರ್ಜ್ ಬಳಿಕ ಮನೆಗೆ ತೆರಳಿದ್ದರು. ಆದರೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಶಾರದಾ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕುಂದಾಪುರ ಪೊಲಿಸ್ ಠಾಣಾ ಸಿಬ್ಬಂದಿಗಳು, ಸಂಚಾರಿ ಠಾಣಾ ಸಿಬ್ಬಂದಿಗಳು, ಅಪರಾಧ ಠಾಣಾ ಸಿಬ್ಬಂದಿಗಳು, ಡಿವೈಎಸ್ಪಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಸಿಬ್ಬಂದಿಗಳು ಮೃತರಿಗೆ ಸಂತಾಪ ಸೂಚಿಸಿದ್ದಾರೆ.