ಬೆಂಗಳೂರು, ಆ 29 (Daijiworld News/MSP): ಗೌರಿ - ಗಣೇಶ ಹಬ್ಬಕ್ಕೆ ಊರಿಗೆ ಹೋಗಿ ಹಬ್ಬದ ಸಂಭ್ರಮವನ್ನು ತಮ್ಮವರು, ತಮ್ಮ ಬಂಧು ಬಳಗದವರ ಜೊತೆಗೆ ಆಚರಣೆ ಮಾಡುವುದಕ್ಕೆ ಅನುಕೂಲವಾಗಲೆಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ಕರಾವಳಿಗರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ.
ಚೌತಿ ಹಬ್ಬಕ್ಕಾಗಿ ಯಶವಂತಪುರ-ಮಂಗಳೂರು ನಡುವೆ ವಿಶೇಷ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಚೌತಿ ಹಬ್ಬ ಬಂತೆಂದರೆ ಮಂಗಳೂರಿನಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ಖಾಸಗಿ ಬಸ್ ಗಳ ಪ್ರಯಾಣ ದರ ದುಪ್ಪಟ್ಟು ಮಾಡುತ್ತಿದ್ದ ಪರಿಣಾಮ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಆದರೆ ಈ ಬಾರಿ ಚೌತಿ ಹಬ್ಬಕ್ಕಾಗಿ ಊರಿಗೆ ಪ್ರಯಾಣಿಸುವವರಿಗೆ ಹಬ್ಬದ ಗಿಫ್ಟ್ ನೀಡಿದ್ದಾರೆ.
ಹಬ್ಬಕ್ಕಾಗಿ ಊರಿಗೆ ಪ್ರಯಾಣಿಸಲು ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಅಂಗಡಿ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಈ ನಡುವೆ ಆ. 30ರಂದು 15 ಬೋಗಿಯನ್ನೊಳಗೊಂಡ ಯಶವಂತಪುರ-ಮಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 2ರಂದು ಹಬ್ಬ ಮುಗಿಸಿ ಹಿಂತಿರುಗಲು15 ಬೋಗಿಯುಳ್ಳ ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್ ವಿಶೇಷ ರೈಲು ವ್ಯವಸ್ಥೆ ಮಾಡಿರುವುದಾಗಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.