ಕಾರ್ಕಳ, ಆ 29 (Daijiworld News/MSP): 1990ರ ಕಾಲಘಟ್ಟದಲ್ಲಿ ಪಾಕಿಸ್ತಾನ ಪ್ರಯೋಜಕತ್ವದಲ್ಲಿ ನಡೆದ ಭಯೋತ್ಪಾದನೆ ಕೃತ್ಯದಿಂದಾಗಿ ಲಕ್ಷಾಂತರಕ್ಕೂ ಮಿಕ್ಕಿ ಕಾಶ್ಮೀರಿ ಪಂಡಿತರ ಕಾಶ್ಮೀರದಲ್ಲಿ ಮನೆ ಮತ್ತು ಆಸ್ತಿಯನ್ನು ಕಳೆದುಕೊಂಡು ದೇಶದ ನಾನಾ ಕಡೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅವರನ್ನು ಪುನರ್ವಸತಿ ಕಲ್ಪಿಸಬೇಕು. ಧಾರ್ಮಿಕ ಕ್ಷೇತ್ರಗಳನ್ನು ಪುನರ್ ನಿರ್ಮಿಸಬೇಕು. ರೋಹಿಂಗ್ಯಾರನ್ನು ದೇಶದಿಂದ ಹೊರ ಕಳುಹಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಮುಖಂಡ ವಿಜಯಕುಮಾರ್ ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ನಗರದ ವಿಸ್ತೃತ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಿ ರಾಷ್ಟ್ರೀಯ ಹಿಂದು ಅಂದೋಲನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಆಡಳಿತವಧಿಯಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಓಡಾಡುತ್ತಿದ್ದ ರೈಲಿಗೆ ಟಿಪ್ಪು ಎಕ್ಸ್ಪ್ರೆಸ್ ಎಂದು ನಾಮಕರಣ ಮಾಡಲಾಗಿತ್ತು. ರಾಜ್ಯ ಅಧಿಕಾರ ನಡೆಸಿದ ಬಿಜೆಪಿ ಸರಕಾರವು ಇದೀಗ ಟಿಪ್ಪು ಜಯಂತಿ ರದ್ದುಗೊಳಿಸಿರುವ ಕ್ರಮವು ಸ್ವಾಗತರ್ಹವಾಗಿದೆ. ಇದರ ಮುಂದುವರಿದ ಭಾಗವಾಗಿ ಟಪ್ಪು ಎಕ್ಸ್ಪ್ರೆಸ್ ಬದಲಾಗಿ ಶ್ರೀ ಕೃಷ್ಣರಾಜ ಒಡೆಯರ್ ಎಕ್ಸ್ಪ್ರೆಸ್ ಎಂದು ನಾಮಕರಣ ಮಾಡಬೇಕು. ಮೈಸೂರು ಅರಸರಾಗಿದ್ದ ಅವರ ಅವಧಿಯಲ್ಲಿ ಕನ್ನಂಬಾಡಿ ಅಣೆಕಟ್ಟು ನಿರ್ಮಾಣಗೊಮಡಿದ್ದು, ಅದರಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ನೀರಿನ ಸಲವತ್ತು ದೊರಕಲು ಕಾರಣವಾಗಿದೆ ಎಂದರು.
ಜೈ ಶ್ರೀ ರಾಮ್ ಹೇಳದ ಕಾರಣಕ್ಕಾಗಿ ಹಿಂಸೆಯಾಯಿತು ಎಂಬ ತಪ್ಪು ಸಂದೇಶವನ್ನು ಸಮಾಜಕ್ಕೆ ನೀಡುತ್ತಿರುವವೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ವಿಜಯಕುಮಾರ್ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಅಂಬಿಕಾ ಮಠದ ಬ್ರಹ್ಮೃಷಿ ಉಮಾಮಹೇಶ್ವರ ಸ್ವಾಮೀಜಿ ಗೋಪಾಕೃಷ್ಣ ಮಲ್ಯ ಮೂಡಬಿದಿರೆ ಮೊದಲಾದವರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.