ಮಂಗಳೂರಿಗೆ ಪ್ರಥಮ ಭೇಟಿ- ಟಿಬೆಟಿಯನ್ ಧರ್ಮಗುರು ದಲಾಯಿಲಾಮ ಆಗಮನ
Thu, Aug 29 2019 12:31:18 PM
ಮಂಗಳೂರು, ಆ 29 (Daijiworld News/MSP): ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿಲಾಮ ಅವರು ಆಗಸ್ಟ್ 29ರ ಗುರುವಾರ ಮಂಗಳೂರಿಗೆ ಆಗಮಿಸಿದ್ದಾರೆ. ಮಧ್ಯಾಹ್ನ 12.20 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಮಂಗಳೂರು ಉಪವಿಭಾಗಾಧಿಕಾರಿ ರವಿ ಚಂದ್ರ ನಾಯ್ಕ್, ಉಪ ಪೊಲೀಸ್ ಆಯುಕ್ತರಾದ ಅರುಣಾಂಶು ಗಿರಿ,ಲಕ್ಷ್ಮೀ ಗಣೇಶ್ ಅವರು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣದ ಹೊರಗಡೆ ಟಿಬೇಟಿಯನ್ ಸಾಂಪ್ರದಾಯಿಕ ನೃತ್ಯದ ಮೂಲಕವೂ ಅವರನ್ನು ಸ್ವಾಗತಿಸಲಾಯಿತು.
ದಲಾಯಿಲಾಮ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಖಾಸಗಿ ಹೋಟೆಲ್ ನಲ್ಲಿ ತಂಗಿರುವ ಅವರನ್ನು ಭಾರೀ ಭದ್ರತೆ ಯಲ್ಲಿ ಝೀರೋ ಟ್ರಾಫಿಕ್ ನಲ್ಲಿ ವಿಮಾನ ನಿಲ್ದಾಣದಿಂದ ನಗರಕ್ಕೆ ಕರೆ ತರಲಾಯಿತು.
ಆ. 30 ರಂದು ನಗರದ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯುವ ಅಖಿಲ ಭಾರತ ಕ್ಯಾಥೊಲಿಕ್ ಶಾಲಾ ಒಕ್ಕೂಟದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲೆಂದು ಇವರು ನಗರಕ್ಕೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮದ ಸುಸೂತ್ರವಾಗಿ ನೆರವೇರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಎಲ್ಲಾ ಸಿದ್ಧತೆ ನಡೆಸಲಾಗಿದೆ.
ಜಿಲ್ಲೆಯಲ್ಲಿ ಬಹಳ ಸಂಖ್ಯೆಯಲ್ಲಿ ಟಿಬೆಟಿಯನ್ ವಿಧ್ಯಾರ್ಥಿಗಳಿರುವ ಹಿನ್ನಲೆಯಲ್ಲಿ 30 ರಂದು ಧರ್ಮಗುರು ದಲಾಯಿಲಾಮರು ಮಂಗಳೂರಿನಲ್ಲಿರುವ ಟಿಬೆಟಿಯನ್ಸ್ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಆ ಬಳಿಕ ಅಂದು ಮತ್ತೆ ನಗರದಲ್ಲಿ ವಾಸ್ತವ್ಯ ಹೂಡಿ ಆಗಸ್ಟ್ 31 ರಂದು ಅವರು ಮಂಗಳೂರಿನಿಂದ ನಿರ್ಗಮಿಸಲಿದ್ದಾರೆ.