ಮಂಗಳೂರು ಡಿ 25 : ಉದ್ಯಮಿ ನಾಗರಾಜ್ ಮನೆ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಆಯುಕ್ತರ ಸೂಚನೆಯಂತೆ ಮೂರು ತಂಡಗಳನ್ನು ರಚಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸ್ಥಳೀಯ ಮೂಲ್ಕಿ ಪೊಲೀಸ್ ನಿರೀಕ್ಷಕರ ಒಂದು ತಂಡ, ಪಣಂಬೂರು ಎಸಿಪಿ ಯವರ ತಂಡ, ಹಾಗೂ ಮಂಗಳೂರಿನ ವಿಶೇಷ ತಂಡ ತನಿಖೆ ಆರಂಭಿಸಿದ್ದು, ಜಿಲ್ಲಾ ಸಿಸಿಬಿ ಸಹ ಪ್ರತ್ಯೇಕವಾಗಿ ತನಿಖೆಯನ್ನು ಕೈಗೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಭೂಗತ ಜಗತ್ತಿನ ಹಫ್ತಾ ಬೆದರಿಕೆಯ ಪ್ರಕರಣವೆಂದೇ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ. ಹಳೆಯಂಗಡಿ ಮೂಲದ ಇದೀಗ ಮೋಸ್ಟ್ ವಾಂಟೆಡ್ ಆಗಿರುವ ಕಲಿ ಯೋಗೀಶ್ನ ಸಹಕಚರರೇ ಇದರಲ್ಲಿ ಶಾಮೀಲಾಗಿರಬಹುದು ಎಂಬ ಶಂಕೆಯಿಂದಲೇ ತನಿಖೆ ನಡೆಸುತ್ತಿರುವ ಪೊಲೀಸರು, ಆತನ ಸಹೋದರ ಗಣೇಶ್ ಮತ್ತು ಹಳೆಯಂಗಡಿ ನಿವಾಸಿ ರೀತು ಯಾನೆ ರಿತೇಶ್ನನ್ನು ವಿಚಾರಣೆಗಾಗಿ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಹದಿನೈದು ದಿನದ ಹಿಂದೆ ಮಂಗಳೂರು ಹಾಗೂ ಕಿನ್ನಿಗೋಳಿಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲೂ ಇವರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದ ಪೊಲೀಸರು ಮತ್ತೆ ನಿನ್ನೆ ರಾತ್ರಿಯೇ ಪಡುಪಣಂಬೂರು ಕಂಬಳ ಪರಿಸರದಿಂದ ಅವರನ್ನು ವಶಕ್ಕೆ ಪಡೆದಿದ್ದಾರೆ.