ಮಂಗಳೂರು, ಆ 29 (Daijiworld News/MSP): ದಕ್ಷಿಣ ಭಾರತದಲ್ಲಿ ಉಗ್ರರು ನುಸುಳಿ ದಾಳಿ ನಡೆಸುವ ಶಂಕೆ ಹಾಗೂ ಮುನ್ನೆಚ್ಚರಿಕೆಯ ಕ್ರಮವಾಗಿ ಕರಾವಳಿ ತೀರದಲ್ಲಿ ಕಟ್ಟುನಿಟ್ಟಿನ ಭದ್ರತೆ ನಿರಂತರವಾಗಿ ಮುಂದುವರಿಯಲಿದೆ. ಮಾತ್ರವಲ್ಲದೆ 15 ದಿನಗಳಿಂದ ಕಡಲ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ಅವರು ತಿಳಿಸಿದ್ದಾರೆ.
ಮೀನುಗಾರರಿಗೆ ಕಡಲು ಅಥವಾ ಕಡಲ ತೀರದಲ್ಲಿ ಶಂಕಿತ ಬೋಟ್ ಮತ್ತು ವ್ಯಕ್ತಿಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಹೀಗಾಗಿ ತಕ್ಷಣ ಮೀನುಗಾರು ಶಂಕಿತ ಬೋಟು ಕಂಡುಬಂದರೆ ಅವರು ಮಾಹಿತಿಯನ್ನು ನೀಡುತ್ತಿದ್ದಾರೆ. ಇದಲ್ಲದೆ ಮಾರ್ಕೆಟ್, ಮಾಲ್, ಆಸ್ಪತ್ರೆ, ಬಸ್ಸು- ರೈಲು ನಿಲ್ದಾಣಗಳಲ್ಲಿ ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ ಎಂದವರು ವಿವರಿಸಿದರು.
ಇದೇ ವೇಳೆ ಸರಕಾರಿ ಲಾಂಛನವನ್ನು ಅನಧಿಕೃತವಾಗಿ ಬಳಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ದಿನಂಪ್ರತಿ ಸುಮಾರು 400 ರಿಂದ 500ರಷ್ಟು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ ಎಂದು ಡಾ| ಹರ್ಷ ತಿಳಿಸಿದ್ದಾರೆ.