ಮಂಗಳೂರು, ಆ.28(Daijiworld News/SS): ಕರ್ನಾಟಕ ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ನಳಿನ್ ಕುಮಾರ್ ಕಟೀಲ್ ಅವರನ್ನು ಗೌರವಿಸುವ ನಿಟ್ಟಿನಲ್ಲಿ, ನಾಳೆ (ಆಗಸ್ಟ್ 29) ಅಭಿನಂದನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಕರಾವಳಿಯಲ್ಲಿ ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸಿ ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿದ ನಮ್ಮ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕರ್ನಾಟಕ ರಾಜ್ಯ ಭಾರತೀಯ ಜನತಾ ಪಕ್ಷದ ಸಾರಥ್ಯ ವಹಿಸಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ. ಆ ನಿಟ್ಟಿನಲ್ಲಿ ಕೊಡಿಯಾಲ್ ಬೈಲ್ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ಬೆಳಗ್ಗೆ 10:30 ಗಂಟೆಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಶ್ರೀ ನಳಿನ್ ಕುಮಾರ್ ಕಟೀಲ್ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಆ.27ರಂದು ಪದಗ್ರಹಣ ಮಾಡಿದ್ದಾರೆ. ಸಚಿವರು, ಸಂಸದರು, ಶಾಸಕರು ಹಾಗೂ ಪಕ್ಷದ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಪಕ್ಷದ ಹೊಣೆಗಾರಿಕೆಯನ್ನು ಅಧಿಕೃತವಾಗಿ ಹೊತ್ತುಕೊಂಡಿದ್ದಾರೆ. ಹಾಲಿ ಅಧ್ಯಕ್ಷರೂ ಆಗಿದ್ದ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ನೂತನ ಅಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಸತತ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿ ಈಗಷ್ಟೇ ಮೂರು ತಿಂಗಳು ಕಳೆದಿದೆ. ಆಗಲೇ ನಳಿನ್ ಅವರಿಗೆ ಕೇಸರಿ ಬ್ರಿಗೇಡ್'ನ ಕಮಾಂಡರ್ ಹುದ್ದೆ ಸಿಕ್ಕಿದೆ. ಈ ಮೂಲಕ ಬಿಜೆಪಿಗೆ ಕಿರಿಯ ವಯಸ್ಸಿನ ವ್ಯಕ್ತಿ ರಾಜ್ಯಧ್ಯಕ್ಷರಾಗಿ ಪಟ್ಟಕ್ಕೇರಿದ್ದಾರೆ.