ಮಂಗಳೂರು, ಆ 27 (DaijiworldNews/SM): ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಗ್ರಾಮದಲ್ಲಿನ ದೇರಳಕಟ್ಟೆಯ ವಸತಿಗೃಹವೊಂದರಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಅಂದರ್ - ಬಾಹರ್ ಎಂಬ ಜೂಜಾಟವಾಡುತ್ತಿದ್ದ 7 ಜನರನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಹಾಗೂ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಹೊಟೇಲ್ ಪ್ಲಾಝಾ ಅವೆನ್ಯೂ ಎಂಬ ವಸತಿಗೃಹದ ಕೊಠಡಿವೊಂದರಲ್ಲಿ ಅಕ್ರಮವಾಗಿ ಜೂಜಾಟ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಹಾಗೂ ಉಳ್ಳಾಲ ಪೊಲೀಸರು ಜೂಜಾಟವಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾಗಿದ್ದ ಮಂಗಳೂರು ನಿವಾಸಿಗಳಾದ ಕಿಶೋರ್ ಕೊಟ್ಟಾರಿ, ನಿತಿನ್, ಅಬ್ದುಲ್ ರಝಾಕ್, ಶಿಲಾಸ್ ಶೆಟ್ಟಿ, ಅರ್ವಿನ್ ಡಿ ಸೋಜಾ, ಅಮೀರುದ್ದೀನ್, ಮೊಹಮ್ಮದ್ ಇಕ್ಬಾಲ್, ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಂದ 2. 34 ಲಕ್ಷ ರೂಪಾಯಿ ನಗದು, 6 ಮೊಬೈಲ್ ಫೋನ್ ಗಳು ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿದ್ದಾರೆ.