ಮಂಗಳೂರು, ಆ.27(Daijiworld News/SS): ಸ್ವಚ್ಛ ಪರಿಸರದ ಜೊತೆ ಸ್ವಚ್ಛ ಮನಸ್ಸನ್ನು ಯುವಪೀಳಿಗೆ ಹೊಂದಿದರೆ ಮಾನವೀಯ ಮೌಲ್ಯ ಜೊತೆಗೂಡುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ನಾಗರತ್ನ ಕೆ ಎ ಅಭಿಪ್ರಾಯಪಟ್ಟರು.
ಕೋಣಾಜೆ ಮಂಗಳಗಂಗೋತ್ರಿ ಕಾಲೇಜಿನ ಆವರಣದಲ್ಲಿ ಆಯೋಜಿಸಲಾದ ರೆಡ್ ಕ್ರಾಸ್ ಯುನಿಟ್ನ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ಜೊತೆಗೆ ರೆಡ್ಕ್ರಾಸ್ನಂತಹ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಗಳಲ್ಲಿ ವಿದ್ಯಾರ್ಥಿ ಜೀವನದಿಂದಲೇ ಗುಣಗಳನ್ನು ಬೆಳೆಸಿಕೊಂಡರೆ ಉತ್ತಮ ನಾಗರಿಕರಾಗಲು ಸಾಧ್ಯ ಎಂದರು. ರೆಡ್ಕ್ರಾಸ್ ಧ್ಯೇಯೋದ್ದೇಶಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅವರು ವಿವರಿಸಿದರು.
ಪ್ರಾಂಶುಪಾಲೆ ಪ್ರೊ ಅನಿತಾ ರವಿಶಂಕರ್ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ರಕ್ತದಾನ ಮಾಡಲು ಪ್ರೇರಣೆ ನೀಡಿದರು. ರಕ್ತದಲ್ಲಿ ಜಾತಿ, ಧರ್ಮ, ಮತಗಳಿಲ್ಲ. ತುರ್ತ ಸಂದರ್ಭದಲ್ಲಿ ರಕ್ತದಾನ ಮಾಡಬೇಕು. ಸಮಾಜಕ್ಕೆ ನಾವೇನು ಮಾಡುತ್ತೇವೆ ಅನ್ನೊದು ಮುಖ್ಯ. ಇನ್ನೊಬ್ಬರ ಬಗ್ಗೆ ಬೊಟ್ಟು ಮಾಡಬಾರದು. ನಮ್ಮಿಂದ ಆದಷ್ಟು ಸಮಾಜಕ್ಕೆ ಸೇವೆ ಮಾಡುವ ಗುಣ ಹೊಂದಿರಬೇಕು ಎಂದು ಹೇಳಿದರು.
ಉಪನ್ಯಾಸಕಿಯರಾದ ಭುವನ, ಜ್ಯೋತಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಮಿಯಾಜ್ ಸ್ವಾಗತಿಸಿದರು. ವಿದ್ಯಾರ್ಥಿ ಅನುಷ್ಕಾ, ಸಿಂಚನಾ ಪ್ರಾರ್ಥಿಸಿದರೆ, ಸೌಮ್ಯ ನಿರೂಪಿಸಿದರು. ಉಪನ್ಯಾಸಕ ಶಫಿಯುಲ್ಲಾ ವಂದಿಸಿದರು.