ಮಂಗಳೂರು, ಆ 26 (DaijiworldNews/SM): ಕೇಂದ್ರ ಸರಕಾರದ ತನಿಖಾ ಸಂಸ್ಥೆ ಹೆಸರಲ್ಲಿ ದರೋಡೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಈ ನಡುವೆ ತೀವ್ರ ವಿಚಾರಣೆ ಮುಂದುವರೆಸಿದ್ದ ಪೊಲೀಸರ ಕೈಗೆ ಮತ್ತಿಬ್ಬರು ಸಿಕ್ಕಿಬಿದ್ದಿದ್ದಾರೆ.
ಪ್ರಮುಖ ಆರೋಪಿ ಸ್ಯಾಮ್ ಪೀಟರ್ ಜತೆ ವ್ಯವಹರಿಸುತ್ತಿದ್ದ ಇಬ್ಬರನ್ನು ಮಂಗಳೂರು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ನಾಗರಬಾವಿ ನಿವಾಸಿಗಳಾದ ನಾಗರಾಜ ಎನ್.ಎಸ್. (39) ಹಾಗೂ ರಾಘವೇಂದ್ರ(31) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪ್ರಮುಖ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದು ಮಾತ್ರವಲ್ಲದೆ, ಎನ್ಸಿಐಬಿ ಬಾವುಟ, ಬೋರ್ಡ್, ಎಂಎಲ್ಸಿ ಪಾಸ್ ಇರುವ ಕಾರು, ಐಡಿ ಕಾರ್ಡ್ಗಳನ್ನು ಮತ್ತು ಎಂಎಲ್ಸಿ ಸಿ.ಆರ್.ಮನೋಹರ್ ಅವರ ವಿಧಾನಸೌಧ ವಾಹನದ ಪಾಸ್ನ್ನು ಕೂಡ ಆರೋಪಿಗಳು ದುರುಪಯೋಗಪಡಿಸಿಕೊಂಡಿರುವ ವಿಚಾರ ತನಿಖೆಯಿಂದ ತಿಳಿದುಬಂದಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ತೀವ್ರ ವಿಚಾರಣೆಯನ್ನು ಮುಂದುವರೆಸಲಾಗಿದೆ.